ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ

ಬೆಳಗಾವಿ : ನಗರದ ಮೆಥೋಡಿಸ್ಟ್ ಚರ್ಚ್ ಸಭಾದ ಪಾಲನಾ ಸಮಿತಿ ಮಾಜಿ ಸದಸ್ಯರು ಹಲ್ಲೆ ಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮೆಥೋಡಿಸ್ಟ್ ಚರ್ಚ್‌ನ ಜಿಲ್ಲಾ ಮೇಲ್ವಿಚಾಕರು ಹಾಗೂ ಜ್ಯೇಷ್ಠ ಸಭಾ ಪಾಲಕಾರಾಗಿರುವ ರೆವರೆಂಡ್ ಡೇವಿಡ್ ನಥಾನಿಯಲ್ ಎಂಬುವರು ಮಾರ್ಕೇಟ್ ಪೊಲೀಸ್ ಠಾಣೆಗೆ ಜು. 31ರಂದು ದೂರು ಸಲ್ಲಿಸಿದ್ದಾರೆ.

ಪಿರನವಾಡಿಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಶಾಂತಾ ಮೂಡಲಗಿ, ವಿಜಯನಗರದ ನೌಕರ ದಿನಕರ ಚಿಲ್ಲಾಳ, ಸೂರ್ಯಕಾಂತ ಕರವಿನಕೊಪ್ಪ, ಅಶೋಕ ನಗರದ ಗಿಲ್ಬರ್ಟ್ ಚಿನ್ನಯ್ಯ, ವೀರಭದ್ರ ನಗರ ಪ್ರಭಾಕರ ಮುಂದಿನಮನಿ ಹಾಗೂ ಡಾ.ವೇದಭೂಷಣ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಮೊದಲು ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾಕರಾಗಿ ಕಾರ್ಯನಿರ್ವಹಿಸುತ್ತಿದ್ದ ನೆಲ್ಸನ್ ಸುಮಿತ್ರಾ ಎಂಬುವರು ಸಾರ್ವನಿಕರು ದೇಣಿಗೆ ರೂಪದಲ್ಲಿ ನೀಡುತ್ತಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದರು. ಸಮಿತಿಯಲ್ಲಿದ್ದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ನೀಡದಿರುವುದು ಮತ್ತು ಸಭೆಗೆ ಹಾಜರಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ 230 ಸಭಾ ಸದಸ್ಯರು ಜಿಲ್ಲಾ ಮೇಲ್ವಿಚಾಕರಾಗಿದ್ದ ನೆಲ್ಸನ್ ಸುಮಿತ್ರಾ ಅವರನ್ನು ಕೆಲಸದಿಂದ ತೆಗೆದು ಹಾಕಿ ಮೆಥೋಡಿಸ್ಟ್ ಚರ್ಚ್ ಸಭಾ ಪಾಲನಾ ಸಮಿತಿ ರದ್ದುಪಡಿಸಿ, ಹೊಸ ಕಮಿಟಿ ರಚಿಸುವಂತೆ ಸದಸ್ಯರು ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಹೊಸ ಕಮಿಟಿ ರಚನೆಗೆ ಮುಂದಾಗುತ್ತಿದ್ದಂತೆ ಕಮಿಟಿಯ ಮಾಜಿ ಸದಸ್ಯರು ನನ್ನ ಕೆಲಸಕ್ಕೆ ಅಡ್ಡಿ ಪಡಿಸಿದ್ದರು. ಜು. 29ರಂದು ಕಮಿಟಿಯ ಮಾಜಿ 5 ಸದಸ್ಯರು ಸುಮಾರು 30 ಜನರನ್ನು ಕರೆದುಕೊಂಡು ಬಂದು ನನ್ನ ಮೇಲೆ ಹಲ್ಲೆಗೆ ಪ್ರಯತ್ನ ನಡೆಸಿದರು. ಅಷ್ಟೇ ಅಲ್ಲದೆ ಚರ್ಚ್‌ನಲ್ಲಿ ಬೈಬಲ್ ಪ್ರಸಂಗ ಮಾಡಬಾರದು. ಆರಾಧನೆಯಲ್ಲಿ ಭಾಗವಹಿಸಬಾರದು ಎಂದು ಷರತ್ತು ವಿಧಿಸಿ, ಜತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ರೆವರೆಂಡ್ ಡೇವಿಡ್ ನಥಾನಿಯಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗಿದ್ದು, ಈ ಸಂಬಂಧ ಕೆಲವರನ್ನು ವಿಚಾರಣೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಾರ್ಕೇಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.