ಸಕ್ಕರೆ ನಾಡಿನ ಸಪ್ತನದಿಗಳಿಗೆ ಈಗ ಜೀವಕಳೆ

ಬೆಳಗಾವಿ: ‘ಸಕ್ಕರೆ ಜಿಲ್ಲೆ’ ಬೆಳಗಾವಿ ‘ಸಪ್ತನದಿಗಳ ನಾಡು’ ಎಂಬ ಕೀರ್ತಿಗೂ ಪಾತ್ರವಾಗಿದೆ. ಈ ನಾಡಲ್ಲಿರುವ ಏಳು ನದಿಗಳು ಈಗ ತುಂಬಿ ಹರಿಯುತ್ತಿವೆ. ಇನ್ನೂ ಐದಾರು ಟಿಎಂಸಿ ನೀರು ಬಂದರೆ ಘಟಪ್ರಭೆ ಭರ್ತಿಯಾಗಿ ಕಂಗೊಳಿಸಲಿದೆ. ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯಲಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಮುಂಗಾರು ಈ ಬಾರಿ ಜನತೆಯ ಅದರಲ್ಲೂ, ವಿಶೇಷವಾಗಿ ರೈತ ಬಾಂಧವರ ಕೈಹಿಡಿದಿದೆ. ಕಳೆದ ವರ್ಷ ಭರ್ತಿಯಾಗದೇ ಖಾಲಿ ಉಳಿದಿದ್ದ ಜಿಲ್ಲೆಯ ಎರಡೂ ಜೀವನದಿಗಳಾದ ಮಲಪ್ರಭಾ ಮತ್ತು ಘಟಪ್ರಭಾ ತುಂಬುವ ಲಕ್ಷಣಗಳು ಕಾಣತೊಡಗಿವೆ. ಕೃಷ್ಣಾ, ಧೂದಗಂಗಾ, ವೇದಗಂಗಾ, ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳಿಗೆ ಈಗ ಜೀವಕಳೆ ಬಂದಿದೆ.

ಘಟಪ್ರಭೆ ತುಂಬಲು ಐದೇ ಟಿಎಂಸಿ: ಘಟಪ್ರಭಾ ನದಿಗೆ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ. 51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರದ ವೇಳೆಗೆ 45.73 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ಅವಧಿಗೆ 28 ಟಿಎಂಸಿ ನೀರು ಸಂಗ್ರಹವಿತ್ತು.

ಈಗಲೂ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಕಾರಣ ಆಗಸ್ಟ್ ಮೊದಲ ವಾರದ ವೇಳೆಗೆ, ಭರ್ತಿಯಾಗುವ ಸಾಧ್ಯತೆ ಇದೆ. ಈ ಜಲಾಶಯದ ಎದದಂಡೆ ಕಾಲುವೆಯಿಂದ ವಿಜಯಪುರದ ಹಳ್ಳಿಗಳು, ಬಲದಂಡೆ ಕಾಲುವೆಯಿಂದ ಬಾಗಲಕೋಟೆಯ ಹಳ್ಳಿಗಳಿಗೆ ಹಾಗೂ ಚಿಕ್ಕೋಡಿ ಉಪಕಾಲುವೆಯಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಹಳ್ಳಿಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ನೀರು ಹರಿಸಲಾಗುತ್ತದೆ. ಬೆಳಗಾವಿ ಮಹಾನಗರ, ಸಂಕೇಶ್ವರದ ಸುತ್ತಲಿನ 16 ಹಳ್ಳಿಗಳಿಗೆ ಕುಡಿಯುವ ನೀರು ಬಿಡಲಾಗುತ್ತದೆ.

ತುಂಬುವುದೇ ಮಲಪ್ರಭೆ: 37 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಮಲಪ್ರಭೆಯಲ್ಲೂ ಗುರುವಾರದ ವೇಳೆಗೆ 17.888 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಮಳೆಗಾಲದ ಅಂತ್ಯಕ್ಕೆ 15 ಟಿಎಂಸಿ ನೀರು ಇಲ್ಲಿ ಸಂಗ್ರಹವಿತ್ತು. ಆದರೆ, ಈ ಬಾರಿ ಮಳೆಗಾಲದ ಆರಂಭದಲ್ಲೇ ಇಷ್ಟೊಂದು ನೀರು ಸಂಗ್ರಹವಾಗಿದ್ದರಿಂದ ಜಲಾಶಯದ ಅಧಿಕಾರಿಗಳು ಖುಷಿಯಾಗಿದ್ದಾರೆ.

ಜಲಾಶಯದಿಂದ ಈ ಬಾರಿ ಹುಬ್ಬಳ್ಳಿ-ಧಾರವಾಡ, ಬೈಲಹೊಂಗಲ, ಸವದತ್ತಿ, ರಾಮದುರ್ಗ ತಾಲೂಕು ಹಾಗೂ ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿಗೆ ನೀರು ಸರಬರಾಜು ಕಷ್ಟವೇನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಲಾಶಯದ ಬಲದಂಡೆ ಕಾಲುವೆಯಿಂದ ಗದಗ ಜಿಲ್ಲೆಯ ರೋಣ ಮತ್ತು ಎಡದಂಡೆ ಕಾಲುವೆಯಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೃಷಿಭೂಮಿಗೆ ನೀರು ಹರಿಸಬಹುದು.

ಮಹಾ ಪ್ರವಾಹಕ್ಕೆ ತತ್ತರಿಸಿದ, ಕೃಷ್ಣೆ, ಧೂದಗಂಗಾ, ವೇದಗಂಗಾ: ಕೃಷ್ಣಾ ನದಿಯೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಉಕ್ಕಿ ಹರಿಯುತ್ತಿದೆ. 1.5 ಲಕ್ಷಕ್ಕಿಂತ ಅಧಿಕ ಕ್ಯೂಸೆಕ್ ನೀರು ಬಾಗಲಕೋಟೆಯ ಹಿಪ್ಪರಗಿ ಬ್ಯಾರೇಜ್‌ನಿಂದ ವಿಜಯಪುರದ ಆಲಮಟ್ಟಿ ಜಲಾಶಯ ತಲುಪುತ್ತಿದೆ. ಅಲ್ಲಿಂದ ನಾರಾಯಣಪುರ ಜಲಾಶಯಕ್ಕೆ ನೀರು ಬಿಡಲಾಗುತ್ತಿದೆ. ಕೃಷ್ಣೆಯ ಜತೆಗೆ, ವೇದಗಂಗಾ, ಧೂದಗಂಗಾ ನದಿಗಳು ‘ಮಹಾ’ ಪ್ರವಾಹಕ್ಕೆ ಉಕ್ಕಿ ಹರಿಯುತ್ತಿವೆ.

ಕೃಷಿಭೂಮಿಗೆ ನೀರು: ಬೆಳಗಾವಿ ಮಹಾನಗರ ಜಲಮೂಲ ರಕ್ಕಸಕೊಪ್ಪ ಭರ್ತಿಯಾಗಿದ್ದು, ಮಾರ್ಕಂಡೇಯ ನದಿ ತುಂಬಿ ಹೆಚ್ಚುವರಿ ನೀರು ಕೃಷಿಭೂಮಿಗಳಿಗೆ ನುಗ್ಗುತ್ತಿದೆ. ಹುಕ್ಕೇರಿ ತಾಲೂಕಿನಲ್ಲಿರುವ ಹಿರಣ್ಯಕೇಶಿ ನದಿ ಮೈದುಂಬಿ ಹರಿಯುತ್ತಿದೆ.

ಕುಡಿವ ನೀರಿನ ಬವಣೆ ಇಲ್ಲ, 5.12 ಲಕ್ಷ ಹೆಕ್ಟೇರ್ ಕೃಷಿಭೂಮಿಗೂ ಜೀವ: ಬೆಳಗಾವಿಯ ಸಪ್ತನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲಾ ಆಡಳಿತ ಸಮರ್ಪಕವಾಗಿ ಜಲಾಶಯಗಳ ನೀರಿನಮಟ್ಟ ನಿರ್ವಹಣೆ ಮಾಡಿದರೆ, ಮುಂಬರುವ ಬೇಸಿಗೆಯಲ್ಲಿ ಬೆಳಗಾವಿಯ ಅಷ್ಟೂ ತಾಲೂಕುಗಳು ಕುಡಿವ ನೀರಿನ ಬವಣೆ ನೀಗಲಿದೆ. ಕಾಲುವೆ ಮುಖಾಂತರ ನೀರು ಹರಿಸಿದರೆ 5.12 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಲಭಿಸಿ, ರೈತರ ಮೊಗದಲ್ಲಿ ಸಂಭ್ರಮದ ನಗು ಚಿಮ್ಮಲಿದೆ.

ತಿಂಗಳಲ್ಲಿ ಘಟಪ್ರಭೆ ಭರ್ತಿ ನಿರೀಕ್ಷೆ: ನಮ್ಮ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 15 ದಿನಗಳ ಕಾಲ ನಿರಂತರ ಮಳೆ ಸುರಿದಿದ್ದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಮಳೆ ಬಾರದ್ದರಿಂದ ಎರಡು ದಿನಗಳಿಂದ ಒಳಹರಿವು 14,009 ಕ್ಯೂಸೆಕ್‌ಗೆ ಇಳಿದಿದೆ. ಇನ್ನೂ ನಾಲ್ಕು ದಿನ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿದರೂ, ಜಲಾಶಯ ಭರ್ತಿಯಾಗಲಿದೆ. ಈ ವರ್ಷ ಜಲಾಶಯ ಭರ್ತಿಯಾಗುವ ಸಾಧ್ಯತೆ ಹೆಚ್ಚಿದ್ದು, ನಮ್ಮ ನಿರೀಕ್ಷೆ ಪ್ರಕಾರ ಆಗಸ್ಟ್ ಮೊದಲ ವಾರದಲ್ಲಿ ಇದು ಕೈಗೂಡಲಿದೆ ಎನ್ನುತ್ತಾರೆ ಘಟಪ್ರಭೆ ಜಲಾಶಯದ ಸಿಬ್ಬಂದಿ.

(ಇಮಾಮಹುಸೇನ್ ಗೂಡುನವರ)