ಸಂಪೂರ್ಣ ವ್ಯರ್ಥವಾದ ಬೆಳಗಾವಿ ಅಧಿವೇಶನ

ಶಿವಮೊಗ್ಗ: ಬೆಳಗಾವಿ ಅಧಿವೇಶನ ಸಂಪೂರ್ಣ ವ್ಯರ್ಥ ಆಗಿದ್ದು, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲ ಆಗಿದೆ ಎಂದು ಎಂಎಲ್​ಸಿ ಆಯನೂರು ಮಂಜುನಾಥ್ ಹೇಳಿದರು.

ಕಾರ್ಯಕಲಾಪ ನಡೆದ 8 ದಿನಗಳ ಅಧಿವೇಶನದಲ್ಲಿ ನೂರಾರು ಸಂಘಟನೆಗಳ ಹೋರಾಟ, ಬೇಡಿಕೆಗಳಿಗೆ ಯಾವುದೇ ಮನ್ನಣೆ ಸಿಗಲಿಲ್ಲ. ಹಾರಿಕೆ ಉತ್ತರ, ನಿರ್ಲಕ್ಷ್ಯನದಿಂದ ಮಂತ್ರಿಗಳು ವರ್ತಿಸಿದರು. ಪ್ರಶ್ನಿಸಿದರೆ ಮರು ಉತ್ತರ ನೀಡುವ ಸಾಮರ್ಥ್ಯವೂ ಮಂತ್ರಿಗಳಿಗೆ ಇರಲಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಬೆಳಗಾವಿಯಲ್ಲಿ ಬೇಡಿಕೆಗಳ ಈಡೇರಿಕೆಗೆ ರೈತರು, ಕಾರ್ವಿುಕರು, ನೌಕರರು, ಅತಿಥಿ ಉಪನ್ಯಾಸಕರು ಸೇರಿ ಅನೇಕ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಹೋರಾಟ ನಡೆಸುತ್ತಿದ್ದರು. ಕುಡಿಯುವ ನೀರು, ಮೂಲ ಸೌಕರ್ಯ ಇಲ್ಲದೆ ಅಮಾನವೀಯ ಸ್ಥಿತಿ ಅನುಭವಿಸಿದರು. ಆದರೂ ರಾಜ್ಯ ಸರ್ಕಾರ ಹೋರಾಟಗಾರರ ಕಡೆ ತಿರುಗಿಯೂ ನೋಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರೈತರ ಸಾಲಮನ್ನಾ ವಿಷಯದ ಸ್ಪಷ್ಟತೆ ನೀಡಲಿಲ್ಲ. ಅನುಕಂಪದ ಮಾತುಗಳೇ ಹೊರತು ನೈಜ ವಿಷಯ ಪ್ರಸ್ತಾಪ ಆಗಲಿಲ್ಲ. ಉತ್ತರ ಕರ್ನಾಟಕ ವಿಷಯಗಳ ಚರ್ಚೆ ನೀರಿಕ್ಷೆಯಲ್ಲಿ ಆ ಭಾಗದ ಜನರಿದ್ದರು. ಆಲಮಟ್ಟಿ, ಮಹಾದಾಯಿ, ಬರಗಾಲ ವಿಷಯಗಳ ಬಗ್ಗೆ ಯೋಚಿಸಲೇ ಇಲ್ಲ. ಪ್ರತ್ಯೇಕತೆ ಕೂಗು ಕೇಳಿಬರುತ್ತಲೇ ಇದೆ. ಎಲ್ಲ ವಿಚಾರಗಳಿಗೂ ನಿರ್ಲಕ್ಷ್ಯ ಉತ್ತರ ಎಂದು ದೂರಿದರು.

ಸಚಿವ ಸಂಪುಟಕ್ಕೆ ಸಂಬಂಧಿಸಿ ಅಸಮಾಧಾನ ಹೆಚ್ಚಾಗಿದೆ. ಬಸವರಾಜ ಹೊರಟ್ಟಿಯಂತಹ ಹಿರಿಯ ನಾಯಕರ ಕಡೆಗಣನೆ ಆಗಿದೆ. ಭಿನ್ನಮತ ಪರಿಣಾಮ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್, ವಿಶೇಷ ಆಹ್ವಾನಿತ ಎಸ್.ದತ್ತಾತ್ರಿ, ಉಪಾಧ್ಯಕ್ಷ ಬಿಳಕಿ ಕೃಷ್ಣಮೂರ್ತಿ, ಮಧುಸೂದನ್, ರತ್ನಾಕರ್ ಶೆಣೈ, ಹಿರಣ್ಣಯ್ಯ, ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಸಮಸ್ಯೆಗೆ ತಲೆಕೆಡಿಸಿಕೊಳ್ಳದ ಸರ್ಕಾರ: ರೈತರು, ಕಾರ್ವಿುಕರು, ಪೊಲೀಸರು, ಅತಿಥಿ ಉಪನ್ಯಾಸಕರು, ಬಗರ್​ಹುಕುಂ ಸಾಗುವಳಿದಾರರು, ಗ್ರಂಥಪಾಲಕರು, ಎನ್​ಪಿಎಸ್ ನೌಕರರು ಸೇರಿ ನೂರಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬೆಳಗಾವಿ ಅಧಿವೇಶನದಲ್ಲಿ ಬೇಡಿಕೆಗಳ ಈಡೇರಿಕೆ ನೀರಿಕ್ಷೆಯಲ್ಲಿದ್ದರು. ಆದರೆ ಯಾರ ಸಮಸ್ಯೆಯ ಬಗ್ಗೆಯೂ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ ಎಂದು ಆಯನೂರು ಮಂಜುನಾಥ್ ತಿಳಿಸಿದರು.

ಇಲಾಖೆ ಮಾಹಿತಿ ಗೊತ್ತಿರದ ಸಚಿವರು: ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷಗಳು ಜನಸಾಮಾನ್ಯರ ಪರ ಹಾಗೂ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿ ಯಾವುದೇ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಲಿಲ್ಲ. ಇಲಾಖೆ ಸಚಿವರ ಬೇಜವಾಬ್ದಾರಿ ಹಾಗೂ ಸಿದ್ಧಗೊಳದಿರುವುದು ಕಾಣುತ್ತಿತ್ತು ಎಂದು ಆಯನೂರು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು. ಪ್ರಶ್ನೆಗೆ ಉತ್ತರಿಸುವ ಬದಲು ಅಧಿಕಾರಿಗಳ ಕಡೆ ಮುಖ ಮಾಡಿ ನಿಲ್ಲುತ್ತಿದ್ದರು. ಚೀಟಿ ಬಂದ ಕೂಡಲೇ ಹಾರಿಕೆ ಉತ್ತರ ನೀಡಿ ಸುಮ್ಮನಾಗುತ್ತಿದ್ದರು. ಶೀಘ್ರವೇ ಬಜೆಟ್ ಅಧಿವೇಶನ ಬರಲಿದೆ. ಆ ಸಂದರ್ಭದಲ್ಲಾದರೂ ಎಲ್ಲ ಇಲಾಖೆ ಸಚಿವರು ಸಿದ್ಧರಾಗಿ ಬರಲಿ ಎಂದು ಆಯನೂರು ಮಂಜುನಾಥ್ ಆಶಿಸಿದರು.

ಸೂಪರ್ ಸಿಎಂ ಪೂರಕ ಬಜೆಟ್: ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದ ಪೂರಕ ಬಜೆಟ್ ಸೂಪರ್ ಸಿಎಂ(ರೇವಣ್ಣ) ಅವರಿಗೆ ಮೀಸಲು. ಸಿಎಂ ಕುಮಾರಸ್ವಾಮಿ ಅವರು ಸೂಪರ್ ಸಿಎಂ ರೇವಣ್ಣ ಅವರಿಗೆ ನೀಡಿದ ಕೊಡುಗೆ ಎಂದು ಎಂಎಲ್​ಸಿ ಆಯನೂರು ಮಂಜುನಾಥ್ ವಿಶ್ಲೇಷಿಸಿದರು. ಪೂರಕ ಬಜೆಟ್​ನಲ್ಲಿ 1998 ಕೋಟಿ ರೂ. ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. 2 ಸಾವಿರ ಕೋಟಿ ರೂ. ಸಹಕಾರ ಇಲಾಖೆಗೆ ನೀಡಲಾಗಿದೆ. ಶಿಕ್ಷಣಕ್ಕೆ 100 ಕೋಟಿ, ಆರೋಗ್ಯಕ್ಕೆ 150 ಕೋಟಿ, ಕಂದಾಯಕ್ಕೆ 50 ಕೋಟಿ ರೂ. ಹೀಗೆ ಇತರೆ ಎಲ್ಲ ಇಲಾಖೆಗೂ ಸೇರಿ 2000 ಕೋಟಿ ರೂ. ನೀಡಲಾಗಿದೆ. ವಿಪಕ್ಷ ವಿರೋಧಿಸಿದರೂ ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಲಿಲ್ಲ. ಚರ್ಚೆಗೆ ಸಿದ್ಧರಿಲ್ಲದ ಕಾಂಗ್ರೆಸ್ ಸಹ ಅನುಮೋದಿಸಲು ಅವಕಾಶ ನೀಡಿತು ಎಂದು ಟೀಕಿಸಿದರು.

ಬೆಳಗಾವಿ ಅಧಿವೇಶನದಲ್ಲಿ ರೈತರು, ಕಾರ್ವಿುಕರು, ಅತಿಥಿ ಉಪನ್ಯಾಸಕರು ಸೇರಿ ಅನೇಕರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಆಗಿ ಪರಿಹಾರ ಸಿಗುವ ಭರವಸೆಯಲ್ಲಿ ಇರುತ್ತಾರೆ. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯನದ ನಡೆಯಿಂದ ಜನಪ್ರತಿನಿಧಿಗಳು ಯಾವುದೇ ವಿಷಯ ಪ್ರಸ್ತಾಪಿಸಲು ಸಾಧ್ಯವಾಗದ ಕಾರಣ ಸಾರ್ವಜನಿಕರಿಗೆ ಕ್ಷಮೆಯಾಚಿಸುವ ಪರಿಸ್ಥಿತಿ ನಿರ್ವಣವಾಗಿದೆ. ಅವರ ತಪ್ಪಿಗೆ ನಮಗೆ ಶಿಕ್ಷೆ.

| ಆಯನೂರು ಮಂಜುನಾಥ್, ಎಂಎಲ್​ಸಿ