ಸಂಪುಟಕ್ಕೆ ಸೇರಲು ಆಂತರಿಕ ಹೋರಾಟ

ಬೆಂಗಳೂರು: ಬೆಳಗಾವಿ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಆಗೇ ಬಿಡುತ್ತದೆ ಎಂದು ನಂಬಿಕೊಳ್ಳದ ಸಚಿವಾಕಾಂಕ್ಷಿ ಕಾಂಗ್ರೆಸ್ ಶಾಸಕರ ಒಂದು ಗುಂಪು ಪರ್ಯಾಯ ಮಾರ್ಗಗಳತ್ತ ಚಿತ್ತ ಹರಿಸಿದೆ. ನಾಲ್ಕು ದಿನಗಳ ಹಿಂದಷ್ಟೇ ಸಭೆ ಸೇರಿದ್ದ ಏಳು ಶಾಸಕರು ಸಂಪುಟ ವಿಸ್ತರಣೆ ಸಂಬಂಧ ನಡೆದಿರುವ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಪಕ್ಷಕ್ಕೆ ಧಕ್ಕೆಯಾಗದ ರೀತಿ ಆಂತರಿಕ ಹೋರಾಟ ಮಾಡಲು ತೀರ್ಮಾನ ಕೈಗೊಂಡಿದ್ದು, ಹಂತಹಂತವಾಗಿ ಒತ್ತಡ ತರಲು ಏನು ಮಾಡಬೇಕೆಂಬ ಬಗ್ಗೆ ಸ್ಪಷ್ಟ ನಿಲುವು ತಾಳಿದ್ದಾರೆ.

ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಗಲೂ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳಿಗೆ ನೇಮಕ ಮಾಡಲು ಮುಂದಾಗಿರಲಿಲ್ಲ. ಈಗಲೂ ಅದೇ ಎಂಬುದು ಸಚಿವಾಕಾಂಕ್ಷಿ ಕಾಂಗ್ರೆಸ್ ಶಾಸಕರ ನಂಬಿಕೆ.

ಬೆಳಗಾವಿಗೆ ಚಕ್ಕರ್: ಡಿ.7ಕ್ಕೆ ತೆಲಂಗಾಣ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಒಂದು ದಿನ ಮುಂಚೆ ಅಲ್ಲಿಂದ ಪ್ರಚಾರ ಮುಗಿಸಿ ಪಕ್ಷದ ಅಧ್ಯಕ್ಷ ರಾಹುಲ್​ಗಾಂಧಿ ದೆಹಲಿಗೆ ಮರಳುವ ಸಾಧ್ಯತೆ ಇದೆ. ಹೀಗಾಗಿ ಡಿ.6 ಅಥವಾ 7ರಂದು ಕಾಂಗ್ರೆಸ್ ಶಾಸಕರ ಒಂದು ನಿಯೋಗ ದೆಹಲಿಗೆ ತೆರಳಿ ರಾಹುಲ್ ಭೇಟಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ.

ಸಭೆಯಲ್ಲಿ 7 ಶಾಸಕರಿದ್ದು, ಇನ್ನೂ ಏಳು ಶಾಸಕರು ಸಂಪರ್ಕದಲ್ಲಿದ್ದಾರೆ. ಇವರೆಲ್ಲರೂ ಒಟ್ಟಾಗಿ ದೆಹಲಿಗೆ ತೆರಳಿ ಸಚಿವ ಸ್ಥಾನ, ನಿಗಮ-ಮಂಡಳಿ ಹಕ್ಕು ಮಂಡಿಸಬೇಕೆಂಬುದು ಯೋಜನೆ ರೂಪಿಸಿಕೊಂಡಿದ್ದಾರೆ. ರಾಹುಲ್ ಮಾತುಕತೆಗೆ ಸಿಗದೇ ಇದ್ದರೆ ಇತರ ಪ್ರಮುಖ ನಾಯಕರ ಮುಂದೆ ಅಳಲು ತೋಡಿಕೊಳ್ಳಲೂ ಉದ್ದೇಶ ಹೊಂದಲಾಗಿದೆ. ಈ ಒತ್ತಡ ಪ್ರಯತ್ನದ ಹೊರತಾಗಿ ಸಂಪುಟ ವಿಸ್ತರಿಸದೆ ಮತ್ತೂ ನಿರ್ಲಕ್ಷ್ಯ ಮಾಡಿದರೆ, ಮುಲಾಜಿಲ್ಲದೆ ವಿಪ್ ಉಲ್ಲಂಘಿಸಿ ಬೆಳಗಾವಿ ಅಧಿವೇಶನದಿಂದ ದೂರ ಇದ್ದು ಅಸಹಕಾರ ತೋರುವುದು ಮತ್ತು ಅಧಿಕಾರಕ್ಕಾಗಿ ಯಾವುದೇ ಕಾರಣಕ್ಕೂ ಪಕ್ಷ ತೊರೆಯದ ಸ್ಪಷ್ಟ ನಿಲುವು ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಮೊದಲ ಯತ್ನವಾಗಿ ಸೋಮವಾರದ ಬಳಿಕ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಲಾಗುತ್ತದೆ.

ಬಿರುಸಿನ ಚಟುವಟಿಕೆ: ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಮಾಡುತ್ತೇವೆಂದು ನಾಯಕರು ಹೇಳಿಕೆ ನೀಡುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಶನಿವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಶಾಸಕ ಆರ್.ಬಿ.ತಿಮ್ಮಾಪುರ ಎಡಗೈ ಕೋಟಾದಿಂದ ಸ್ಥಾನ ನೀಡುವಂತೆ ಒತ್ತಾಯಿಸಿದರು. ರಾಮಲಿಂಗಾ ರೆಡ್ಡಿ ಸಹ ಕೆಪಿಸಿಸಿ ಕಚೇರಿಗೆ ಆಗಮಿಸಿ ಅಧ್ಯಕ್ಷರೊಂದಿಗೆ ರ್ಚಚಿಸಿದರು.

ಶಿವಳ್ಳಿ-ಎಂಟಿಬಿ ಚಾಯ್ಸ್​ 

ಸಂಪುಟ ವಿಸ್ತರಣೆ ಆಗುತ್ತದೋ ಬಿಡುತ್ತದೋ ಬೇರೆ ಮಾತು. ಸಚಿವ ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗುತ್ತಿದ್ದು, ಕುರುಬ ಕೋಟಾದಿಂದ ಶಿವಳ್ಳಿ ಮತ್ತು ಎಂ.ಟಿ.ಬಿ.ನಾಗರಾಜ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರ ಪೈಕಿ ಯಾರನ್ನೇ ಆರಿಸಿದರೂ ಮತ್ತೊಬ್ಬರು ಕೆರಳುವುದು ಖಚಿತ. ಈ ಕಾರಣಕ್ಕೆ ಅವರಿಬ್ಬರಲ್ಲೇ ಒಂದು ತೀರ್ವನಕ್ಕೆ ಬರಲು ಸಿದ್ದರಾಮಯ್ಯ ಸೂತ್ರ ರೂಪಿಸಿದ್ದಾರೆ. ಆದರೆ, ಈ ಸೂತ್ರಕ್ಕೆ ಶಿವಳ್ಳಿ ಒಪ್ಪಲು ಸಿದ್ಧರಿಲ್ಲ ಎನ್ನಲಾಗಿದೆ. ಶಾಸಕ ಬಿ.ಕೆ.ಸಂಗಮೇಶ್​ರನ್ನು ನಿಗಮ- ಮಂಡಳಿಗೆ ಮನವೊಲಿಸುವಲ್ಲಿ ಸಿದ್ದರಾಮಯ್ಯ ಸಫಲರಾಗಿದ್ದಾರೆ ಎನ್ನಲಾಗಿದೆ.