ರೆಸಾರ್ಟ್ ರಾಜಕಾರಣಕ್ಕೆ ಚಿಕ್ಕೋಡಿಯಲ್ಲಿ ತೀವ್ರ ಖಂಡನೆ

ಚಿಕ್ಕೋಡಿ: ರೆಸಾರ್ಟ್ ರಾಜಕಾರಣ ಮಾಡುವ ಶಾಸಕರ ಮೇಲೆ ರಾಜ್ಯಪಾಲರು ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪಟ್ಟಣದ ಬಸವ ಸರ್ಕಲ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಶಾಸಕರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು.

ಬಳಿಕ ರೈತ ಸಂಘದ ರಾಜ್ಯ ವಕ್ತಾರ ತ್ಯಾಗರಾಜ ಕದಂ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರ ಅವರಿಸಿದೆ. ಜನ,ಜಾನುವಾರಗಳಿಗೆ ಕುಡಿಯುವ ನೀರಿಲ್ಲ. ದನಕರುಗಳಿಗೆ ಮೇವಿಲ್ಲ. ಹಾಗಾಗಿ ಜನರು ಗುಳೆ ಹೋಗುತ್ತಿದ್ದಾರೆ. ಈ ಸಮಯದಲ್ಲಿ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ವೈಯಕ್ತಿಕ ಸ್ವಾರ್ಥಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ರಾಜ್ಯಪಾಲರು ಶಾಸಕರ ಮೇಲೆ ಶಿಸ್ತು ಕ್ರಮ ಕೈಗೊಂಡು ಸ್ವಚ್ಛ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಇಳಿಯುವ ಮುನ್ನ ಶಾಸಕರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ರವೀಂದ್ರ ಪಟ್ಟೇಗಾರ, ಚಂದ್ರಶೇಖರ ಸಾರಂಗಿ, ಗಜು ಮತಾರೆ, ಶಂಕರ ವಡೇದ, ಅಪ್ಪಾಸಾಹೇಬ ಕುರಣೆ, ಆನಂದ ಪಾಶ್ಚಾಪುರೆ, ಬಸವರಾಜ ಪಾಶ್ಚಾಪುರೆ, ಮಹಾದೇವ ಸನದಿ, ಸತಿಗೌಡ ಪಾಟೀಲ ಸೇರಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.