ಪೊಲೀಸ್ ಠಾಣೆ ಎದುರು ರೈತನ ಶವವಿಟ್ಟು ಪ್ರತಿಭಟನೆ

ರಾಯಬಾಗ: ಜಮೀನು ವಿವಾದ ಹಿನ್ನೆಲೆಯಲ್ಲಿ ದಾಯಾದಿಗಳ ವಿರುದ್ಧ ನೀಡಿದ್ದ ದೂರನ್ನು ಪೊಲೀಸರು ದಾಖಲಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಂಬಂಧಿಗಳು ಪೊಲೀಸ್ ಠಾಣೆಯ ಮುಂದೆ ಶವವಿಟ್ಟು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ.

ರಾಯಬಾಗ ಗ್ರಾಮೀಣ ಭಾಗದ ಆನೆಬಾಯಿಕೋಡಿ ನಿವಾಸಿ ಸದಾಶಿವ ರಾಮಾ ಬಂತೆ (40) ಮೃತ ದುರ್ದೈವಿ. ಜಮೀನು ಕಬ್ಜೆಗೆ ಸಂಬಂಧಿಸಿದಂತೆ ದಾಯಾದಿಗಳ ಕಲಹದಿಂದ ಬೇಸತ್ತು ಹೋಗಿದ್ದ ಸದಾಶಿವ ಬಂತೆ ಪೊಲೀಸರಿಗೆ ದೂರು ನೀಡಲು ಹೋಗಿದ್ದರು. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರಿಂದ ತೀವ್ರ ಮನನೊಂದಿದ್ದರು. ಶನಿವಾರ ಮಧ್ಯಾಹ್ನ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ರೈತನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಮಿರಜ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ನಸುಕಿನ ಜಾವ ಮೃತಪಟ್ಟಿದ್ದಾರೆ.

ರೈತ ಸದಾಶಿವ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಆತನ ಸಂಬಂಧಿಕರು ಭಾನುವಾರ ಬೆಳಗ್ಗೆ ಪಟ್ಟಣದ ಪೊಲೀಸ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು. ನ್ಯಾಯ ಸಿಗುವವರೆಗೆ ಶವವನ್ನು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ವಿಷಯ ತಿಳಿದು ಠಾಣೆಗೆ ಆಗಮಿಸಿದ ಸಿಪಿಐ ಪ್ರೀತಂ ಶ್ರೇಯಕರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಮೃತನ ಕುಟುಂಬದವರಿಗೆ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು. ನಂತರ ಸಂಬಂಧಿಗಳು ಪ್ರತಿಭಟನೆ ಹಿಂದಕ್ಕೆ ಪಡೆದರು. ಡಿವಾಯ್‌ಎಸ್‌ಪಿ ಆರ್.ಎಸ್.ಬಸರಗಿ, ಹಾರೂಗೇರಿ ಮತ್ತು ಕುಡಚಿ ಪಿಎಸ್‌ಐ ಹಾಗೂ ಸಿಬ್ಬಂದಿ ಠಾಣೆಗೆ ಭೇಟಿ ನೀಡಿದರು.

ಮೃತನ ಸಂಬಂಧಿಕ ಬೀರಪ್ಪ ಬಂತೆ ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಸುರೇಶ ಹಾಲಪ್ಪ ಬಂತೆ, ಮಾಯಪ್ಪ ಬಸಲಿಂಗ ಬಂತೆ, ಸಿದ್ದಪ್ಪ ಬಸಲಿಂಗ ಬಂತೆ ಹೀಗೆ ಒಟ್ಟು 27 ಜನರ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 24 ಆರೋಪಿಗಳು ಪರಾರಿಯಾಗಿದ್ದಾರೆ.