ಗೋಡಂಬಿ ಮಾರಿದವರಿಗೆ ಪಂಗನಾಮ

ಬೆಳಗಾವಿ: ದೇಶಾದ್ಯಂತ ದಿನೇ ದಿನೆ ಹೆಚ್ಚುತ್ತಿರುವ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇವುಗಳ ಸಾಲಿಗೆ ಬೆಳಗಾವಿ ನಗರದಲ್ಲಿನ ಉದ್ಯಮಿಗಳಿಗೆ ಮುಂಬೈ ಮೂಲದ ಕಂಪನಿ ವಂಚಿಸಿರುವುದು ಹೊಸ ಸೇರ್ಪಡೆಯಾಗಿದೆ.

ರೈತರಿಂದ ಖರೀದಿಸಿದ್ದ ಗೋಡಂಬಿಯನ್ನು ಸಂಸ್ಕರಿಸಿ ಮುಂಬೈ ಮೂಲದ ಕಂಪನಿಗೆ ಮಾರಾಟ ಮಾಡಿದ್ದ ಬೆಳಗಾವಿ ಗ್ರಾಮೀಣ ವಲಯದ ಗೋಡಂಬಿ ಸಂಸ್ಕರಣಾ ಘಟಕದ ಮಾಲೀಕರಿಗೆ ಕಂಪನಿ ಪಂಗನಾಮ ಹಾಕಿದ್ದು, 1 ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ಗೋಡಂಬಿ ಮಾರಾಟ ಮಾಡಿದ್ದ ಮಾಲೀಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮೋಸಕ್ಕೆ ಒಳಗಾಗಿರುವ ಗೋಡಂಬಿ ಸಂಸ್ಕರಣಾ ಘಟಕದ ಮಾಲೀಕರು ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅತ್ತ ಸಂಸ್ಕರಣಾ ಘಟಕಕ್ಕೆ ಗೋಡಂಬಿ ನೀಡಿದ್ದ ರೈತರು ಚಿಂತಾಕ್ರಾಂತರಾಗಿದ್ದು, ತಮ್ಮ ಹಣಕ್ಕಾಗಿ ಘಟಕಗಳ ಮಾಲೀಕರನ್ನು ಪೀಡಿಸುತ್ತಿದ್ದಾರೆ. ತಮಗಾಗಿರುವ ಮೋಸಕ್ಕೆ ಸಂಬಂಧಿಸಿ ಸಂಸ್ಕರಣ ಘಟಕದ ಮಾಲೀಕರು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದು, 1 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಗೋಡಂಬಿ ಮಾರಾಟ ಮಾಡಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.

ಎಲ್ಲಿನ ಘಟಕಗಳು

ಬೆಳಗಾವಿಯಿಂದ ರಕ್ಕಸಕೊಪ್ಪಕ್ಕೆ ತೆರಳುವ ಮಾರ್ಗದಲ್ಲಿರುವ ಬೆಳಗುಂದಿ, ಸೋನೋಲಿ, ರಕ್ಕಸಕೊಪ್ಪ, ಮಹಾರಾಷ್ಟ್ರದ ಶಿನೋಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ರೈತರು ಗೋಡಂಬಿ ಬೆಳೆಯುತ್ತಾರೆ. ಹೀಗೆ ಬೆಳೆದ ಗೋಡಂಬಿಯನ್ನು ಸೋನೋಲಿ ಸುತ್ತಲಿರುವ ಸಂಸ್ಕರಣಾ ಘಟಕಗಳ ಮಾಲೀಕರು ಪಡೆದು, ಮುಂಬೈ ಮೂಲದ ಅಷ್ಟವಿನಾಯಕ ಕಂಪನಿಗೆ ಕಳುಹಿಸುತ್ತಿದ್ದರು. ಇಲ್ಲಿನ ಆರು ಘಟಕಗಳ ಮಾಲೀಕರು 4 ತಿಂಗಳಿನಿಂದ ಅಷ್ಟವಿನಾಯಕ ಕಂಪನಿಗೆ ಗೋಡಂಬಿ ಕಳುಹಿಸಿದ್ದಾರೆ. ಮುಂಬೈನಿಂದ ಬರುತ್ತಿದ್ದ ಕಂಪನಿ ವಾಹನದಲ್ಲಿ ಗೋಡಂಬಿ ಸಾಗಿಸಲಾಗುತ್ತಿತ್ತು.

ಮೊದಲು ಮೂಡಿದ್ದ ವಿಶ್ವಾಸ

ಗೋಡಂಬಿ ಮುಂಬೈ ತಲುಪುತ್ತಲೆ ಅಷ್ಟವಿನಾಯಕ ಕಂಪನಿ ಮುಖ್ಯಸ್ಥರು ಆರ್‌ಟಿಜಿಎಸ್ ಮೂಲಕ ಇಲ್ಲವೆ, ಚೆಕ್ ಮುಖಾಂತರ ಹಣ ಸಂದಾಯ ಮಾಡುತ್ತಿದ್ದರು. ಆರಂಭದಲ್ಲಿ ಬೇಗ ಹಣ ಸಂದಾಯ ಮಾಡಿ, ಬೆಳಗಾವಿ ಗೋಡಂಬಿ ಸಂಸ್ಕರಣಾ ಘಟಕದ ಮಾಲೀಕರ ವಿಶ್ವಾಸ ಗಳಿಸಿದ್ದರು. ಆರಂಭದಲ್ಲಿ ಬೇಗ ಹಣ ನೀಡುತ್ತಿದ್ದುದರಿಂದ ನಾವು ದೀಪಾವಳಿ ಹಬ್ಬಕ್ಕೂ ಮುನ್ನ, ಅಂದಾಜು 1.5 ಕೋಟಿ ರೂ. ಮೌಲ್ಯದ ಗೋಡಂಬಿಯನ್ನು ಮುಂಬೈನ ಕಂಪನಿಯ ವಾಹನದಲ್ಲೆ ಕಳುಹಿಸಿದ್ದೆವು. ಆಗ ಕಂಪನಿ ನಮಗೆ ಎಕ್ಸಿಸ್ ಬ್ಯಾಂಕಿನ ಚೆಕ್ ನೀಡಿತ್ತು. ಆದರೆ, ಬ್ಯಾಂಕ್‌ನಲ್ಲಿ ಆ ಚೆಕ್ ಬೌನ್ಸ್ ಆಗಿದೆ. ಮುಂಬೈ ಕಂಪನಿಗೆ ಕರೆ ಕೂಡ ಹೋಗುತ್ತಿಲ್ಲ. ಅಲ್ಲಿಗೆ ಹೋಗಿ ವಿಚಾರಿಸಿದರೆ ಕಂಪನಿಯವರು ಪರಾರಿಯಾಗಿದ್ದಾರೆ ಎಂದು ಸೋನೋಲಿಯ ಗೋಡಂಬಿ ಸಂಸ್ಕರಣಾ ಘಟಕದ ಮಾಲೀಕರಾದ ಸೋಮನಾಥ ಮಜುಕರ, ರಾಜೇಂದ್ರ ಪಾಟೀಲ ಮತ್ತಿತರರು ಅಳಲು ತೋಡಿಕೊಂಡರು.

ಅಪಾಯದ ಸುಳಿಯಲ್ಲಿ

ಈಗ 1 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಗೋಡಂಬಿ ಮಾರಾಟ ಮಾಡಿ, ಅಸಹಾಯಕರಾಗಿರುವ ಘಟಕಗಳ ಮಾಲೀಕರು ಅಪಾಯದ ಸುಳಿಗೆ ಸಿಲುಕಿದ್ದಾರೆ. ನಮ್ಮ ಹಣವನ್ನು ಕೊಡಿಸಿ ಎಂದು ಪೊಲೀಸರ ಬೆನ್ನು ಬಿದ್ದಿದ್ದಾರೆ. ಇಲ್ಲದಿದ್ದರೆ ಆತ್ಮಹತ್ಯೆ ಹಾದಿ ಹಿಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಕಣ್ಣೀರು ಸುರಿಸುತ್ತಿದ್ದಾರೆ.

ಮುಂಬೈಗೆ ಪೊಲೀಸರ ತಂಡ

ಗೋಡಂಬಿ ಸಂಸ್ಕರಣಾ ಘಟಕಗಳ ಮಾಲೀಕರು ಪ್ರತ್ಯೇಕವಾಗಿ ಐದಾರು ದೂರು ನೀಡಿದ್ದು, 1 ಕೋಟಿಗಿಂತ ಅಧಿಕ ಮೌಲ್ಯದ ಗೋಡಂಬಿ ಮಾರಾಟ ಮಾಡಿದ್ದು, ನಮಗೆ ಮೋಸವಾಗಿದೆ ಎಂದು ಬೆಳಗಾವಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗೆ ಬೆಳಗಾವಿ ಗ್ರಾಮೀಣ ಠಾಣೆ ಮತ್ತು ಸಿಸಿಬಿ ಮೂವರು ಪೊಲೀಸ್ ಅಧಿಕಾರಿಗಳ ತಂಡ ಮುಂಬೈಗೆ ತೆರಳಿದೆ.