ಮಾಸಾಶನಕ್ಕೆ ಹೆಚ್ಚಿದ ಬೇಡಿಕೆ

ಬೆಳಗಾವಿ: ಜಿಲ್ಲೆಯಲ್ಲಿ ದೇಸಿ ಕಲೆ ಕುಸ್ತಿ ಕ್ರೀಡೆಯ ಮಾಸಾಶನ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಈ ವರ್ಷವೂ ಮಾಸಾಶನ ಮಂಜೂರಾತಿ ಕೋರಿ 15-20 ಅರ್ಜಿಗಳು ಸಲ್ಲಿಕೆಯಾಗಿವೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರದ ನಿರ್ದೇಶನದ ಪ್ರಕಾರ, ರಾಜ್ಯಮಟ್ಟದಲ್ಲಿ ಸಾಧನೆಗೈದ ಕುಸ್ತಿಪಟುಗಳಿಗೆ ಮಾಸಿಕ 2,500 ರೂಪಾಯಿ, ರಾಷ್ಟ್ರಮಟ್ಟದ ಜಟ್ಟಿಗಳಿಗೆ 3,000 ರೂಪಾಯಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕುಸ್ತಿಪಟುವಿಗೆ ಮಾಸಿಕ 4,000 ರೂ. ಮಾಸಾಶನ ನೀಡುತ್ತಿದೆ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಮೂರು ವಿಭಾಗಗಳಲ್ಲಿ ಒಟ್ಟು 153 ಕುಸ್ತಿಪಟುಗಳು ಮಾಸಾಶನ ಪಡೆಯುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಕುಸ್ತಿಪಟುಗಳ ಮಾಸಾಶನ ಮೊತ್ತವನ್ನು ಹೆಚ್ಚಿಸಿದೆ. ಇಲಾಖೆಯಿಂದ ಕುಸ್ತಿಪಟುಗಳ ಬ್ಯಾಂಕ್ ಖಾತೆಗೆ ನೇರವಾಗಿ ನಗದು ಜಮೆಯಾಗುತ್ತಿದೆ.

60 ವರ್ಷ ಮೇಲ್ಪಟ್ಟ ಕುಸ್ತಿಪಟುಗಳಿಗೆ ಮಾಸಾಶನ ನೀಡುತ್ತಿರುವ ಸರ್ಕಾರ, ದೇಸಿ ಕಲೆಯನ್ನು ತಮ್ಮೂರಿನಲ್ಲಿ ಜೀವಂತವಾಗಿಡಲು ಯುವಕರನ್ನು ಪ್ರೇರಣೆ ತುಂಬುವಂತೆ ಪ್ರೋತ್ಸಾಹಿಸುತ್ತಿದೆ. ಕುಸ್ತಿ ಪಟುಗಳು ತಮ್ಮೂರಿನಲ್ಲಿ ನಡೆಯುವ ಜಾತ್ರೆ-ಉತ್ಸವಗಳಲ್ಲಿ ಕುಸ್ತಿಗೆ ಜೀವ ತುಂಬುತ್ತಿದ್ದಾರೆ.

ಹೆಚ್ಚಿನ ಮಾಶಾಸನದ ಬೇಡಿಕೆ: ಹಿರಿಯ ಕುಸ್ತಿಪಟುಗಳು ಮಾಶಾಸನ ಹೆಚ್ಚಳ ಮಾಡುವ ಕುರಿತು ಮೇಲಧಿಕಾರಿಗಳಿಗೆ ಒತ್ತಾಯಿಸುತ್ತಿದ್ದಾರೆ. ಸರ್ಕಾರ ಈಗ ನೀಡುತ್ತಿರುವ ಮಾಸಾಶನ ಯಾತಕ್ಕೂ ಸಾಲುತ್ತಿಲ್ಲ. ಹಲವು ಆರೋಗ್ಯ ಸಮಸ್ಯೆಗಳಿಗೆ ಈಡಾಗಿದ್ದೇವೆ. ನಮಗೆ ಮಾಸಾಶನದ ಮೊತ್ತ ಹೆಚ್ಚಿಸಬೇಕೆಂದು ಕೋರುತ್ತಿದ್ದಾರೆ. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿರುವುದಾಗಿ ಹೇಳಿ ಕುಸ್ತಿಪಟುಗಳನ್ನು ಕಳುಹಿಸುತ್ತಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಮಾಸಾಶನ ಪಡೆಯುತ್ತಿರುವ ಕುಸ್ತಿಪಟುಗಳ ಸಂಖ್ಯೆ ಹೆಚ್ಚಿದೆ. ಈ ವರ್ಷವೂ ಹೊಸದಾಗಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ನಂತರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಕುಸ್ತಿಗೆ ಉತ್ತೇಜನ ನೀಡಲು ಎಲ್ಲ ಕ್ರಮ ವಹಿಸಲಾಗಿದೆ. ಮಾಸಾಶನ ಹೆಚ್ಚಳದ ಕುರಿತು ಬಹಳಷ್ಟು ಮನವಿಗಳು ಬರುತ್ತಿದ್ದು, ಸರ್ಕಾರ ಈ ಬಗ್ಗೆ ತೀರ್ಮಾನಿಸಲಿದೆ.
ಸೀಬಿರಂಗಯ್ಯ
ಉಪನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ