ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲ

ಬೆಳಗಾವಿ: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಸಚಿವ ರಮೇಶ ಜಾರಕಿಹೊಳಿ ತಮ್ಮ ಬೆಂಬಲಿಗರು ಮತ್ತು ಶಾಸಕರೊಂದಿಗೆ ಪ್ರವಾಸಕ್ಕೆ ಹೋಗಿದ್ದಾರೆ. ಹಾಗೆಂದು ಅದನ್ನು ಗುಂಪುಗಾರಿಕೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರು ಮತ್ತು ಶಾಸಕರು ಒಟ್ಟಿಗೆ ಪ್ರವಾಸ ಹೋಗುವುದು ಸಾಮಾನ್ಯ. ಹಾಗೆಯೆ ಸಚಿವ ರಮೇಶ ಜಾರಕಿಹೊಳಿ ಕೆಲವು ಶಾಸಕರೊಂದಿಗೆ ಅಜ್ಮೀರ್ ಮತ್ತು ವಿವಿಧ ದೇವಸ್ಥಾನಗಳಿಗೆ ಪ್ರವಾಸ ತೆರಳಿದ್ದಾರೆ. ಇದನ್ನು ತಪ್ಪಾಗಿ ಬಿಂಬಿಸುವುದರಲ್ಲಿ ಅರ್ಥವಿಲ್ಲ ಎಂದರು.

ಕಳೆದ ನಾಲ್ಕೈದು ವರ್ಷಗಳಿಂದ ದುಬೈ, ಗುಜರಾತ್ ಮತ್ತಿತರ ಕಡೆ ಶಾಸಕರೊಂದಿಗೆ ನಾನೂ ಪ್ರವಾಸ ನಡೆಸಿದ್ದೇನೆ. ಈ ವರ್ಷವೂ ಆಗಸ್ಟ್‌ನಲ್ಲಿ ಹಾಲಿ, ಮಾಜಿ ಶಾಸಕರು ಹಾಗೂ ಬೆಂಬಲಿಗರೊಂದಿಗೆ ಸಿಕ್ಕಿಂ ಮತ್ತಿತರ ಕಡೆ ಪ್ರವಾಸ ಹೊರಟಿದ್ದೇವೆ. ಅದನ್ನು ಗುಂಪುಗಾರಿಕೆ ಎಂದು ಬಿಂಬಿಸಿದರೆ ಹೇಗೆ, ಇದು ಜನರನ್ನು ದಾರಿ ತಪ್ಪಿಸುವ ಕೆಲಸವಲ್ಲವೇ ಎಂದು ಪ್ರಶ್ನಿಸಿದರು.

ಅಭಿವೃದ್ಧಿಗೆ ಆದ್ಯತೆ: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬೆಳಗಾವಿ ಜಿಲ್ಲೆಗೆ 2 ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇರಿಸಿಲ್ಲ. ಈಗಾಗಲೇ ಒಬ್ಬರಿಗೆ ಸಚಿವ ಸ್ಥಾನ ನೀಡಿದ್ದಾರೆ. ಮತ್ತೊಂದು ಸಚಿವ ಸ್ಥಾನ ನೀಡಬೇಕು ಎಂದು ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿಲ್ಲ. ಸಚಿವ ಸ್ಥಾನಕ್ಕಾಗಿ ಅಲ್ಲ, ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಉಸ್ತುವಾರಿ ನೇಮಿಸಲು ಒತ್ತಡ:  ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ತಿಂಗಳು ಕಳೆದಿದೆ. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗಿದೆ. ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ತುರ್ತು ಕಾಮಗಾರಿ ಕೈಗೊಳ್ಳಲು ಉಸ್ತುವಾರಿ ಸಚಿವರ ಮಾರ್ಗದರ್ಶನ, ಸಹಕಾರ ಅಗತ್ಯವಾಗಿದೆ. ಉಸ್ತುವಾರಿ ಸಚಿವರು ಇಲ್ಲದಿರುವುದರಿಂದ ಸಮಸ್ಯೆ ತಲೆ ಎತ್ತಿರುವುದು ನಿಜ. ಇಲ್ಲಿಯವರೆಗೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ, ಕೆಡಿಪಿ ಸಭೆಗಳು ನಡೆದಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.