Friday, 16th November 2018  

Vijayavani

Breaking News

ಬೆಳಗಾವಿ ಹುಕ್ಕೇರಿ ಸಾರಿಗೆ ಬಸ್ ವಿರುದ್ಧ ಝಂಗಟಿಹಾಳದಲ್ಲಿ ಪ್ರತಿಭಟನೆ

Friday, 13.07.2018, 5:36 PM       No Comments

ಹುಕ್ಕೇರಿ: ಕಲೆಕ್ಷನ್ ಕಡಿಮೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಬಸ್‌ನಲ್ಲಿ ಪ್ರಯಾಣಿಸಲು ಅಡ್ಡಿಪಡಿಸುವ ಬಸ್ ನಿರ್ವಾಹಕರ ನೀತಿ ಖಂಡಿಸಿ ತಾಲೂಕಿನ ಝಂಗಟಿಹಾಳ ಗ್ರಾಮಸ್ಥರು ಶುಕ್ರವಾರ ಎರಡು ಗಂಟೆ ಬಸ್ ಸಂಚಾರ ತಡೆದು ಪ್ರತಿಭಟಿಸಿದ್ದಾರೆ.

ಬಸ್ ನಿರ್ವಾಹಕರು ಮತ್ತು ಚಾಲಕರು ವಿದ್ಯಾರ್ಥಿಗಳನ್ನು ಕಡೆಗಣಿಸಿ ಕೇವಲ ಪ್ರಯಾಣಿಕರಿಗೆ ಮಾತ್ರ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳ ಶಾಲೆ ಜೀವನಕ್ಕೆ ಎಳ್ಳು ನೀರು ಬಿಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ನಿರ್ವಾಹಕರ ಚೆಲ್ಲಾಟ,ವಿದ್ಯಾರ್ಥಿಗಳ ಪರದಾಟಕ್ಕೆ ರೋಸಿ ಪ್ರತಿಭಟನೆ ಕೈಗೆತ್ತಿಕೊಂಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಂಕೇಶ್ವರ ಗೋಕಾಕ ರಾಜ್ಯ ಹೆದ್ದಾರಿಯ ಪ್ರಮುಖ ಗ್ರಾಮವಾಗಿರುವ ಝಂಗಟಿಹಾಳ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಹುಕ್ಕೇರಿ, ಸಂಕೇಶ್ವರ ಹಾಗೂ ಘಟಪ್ರಭಾ, ಗೋಕಾಕ ಪಟ್ಟಣದ ಶಾಲೆ ಕಾಲೇಜುಗಳಿಗೆ ತೆರಳುತ್ತಾರೆ. ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಂದ ಪ್ರಯಾಣಿಸುತ್ತಾರೆ. ವಿದ್ಯಾರ್ಥಿಗಳು ವಾರ್ಷಿಕ ಶುಲ್ಕ ಸಲ್ಲಿಸಿ ರಿಯಾಯಿತಿ ಪಾಸ್ ಪಡೆದರೂ ಬಸ್‌ನಲ್ಲಿ ಪ್ರಯಾಣಿಸಲು ನಿರ್ವಾಹಕ, ಚಾಲಕರು ಅಡ್ಡಿಪಡಿಸುತ್ತಾರೆ. ಸಾರಿಗೆ ಸಂಸ್ಥೆಗೆ ನಿರೀಕ್ಷಿತ ಕಲೆಕ್ಷನ್ ಆಗುವುದಿಲ್ಲ ಎಂದು ವಿದ್ಯಾರ್ಥಿಗಳು ಇದ್ದಲ್ಲಿ ಸಾರಿಗೆ ಸಿಬ್ಬಂದಿ ಬಸ್ ನಿಲುಗಡೆ ಮಾಡದೆ ಮುಂದಕ್ಕೆ ಹೋಗುತ್ತಾರೆ. ಇದರಿಂದ ವಿದ್ಯಾರ್ಥಿಗಳ ಶಾಲೆ ಜೀವನಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಧಾವಿಸಿದ ಹುಕ್ಕೇರಿ ಪಿಎಸ್‌ಐ ಪ್ರಲ್ಹಾದ ಚೆನ್ನಗಿರಿ, ಸಂಕೇಶ್ವರ ವೃತ್ತದ ಡಿಪೋ ಮ್ಯಾನೇಜರ ಕರೆಸಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಸಮಸ್ಯೆ ತಿಳಿಸಿದರು. ಶಾಲೆ ಅವಧಿಯಲ್ಲಿ ಬಸ್ ನಿಲುಗಡೆ ಮಾಡಬೇಕು ಎಂದು ಮನವರಿಕೆ ಮಾಡಿಕೊಟ್ಟರು. ಬಸ್ ಸಿಬ್ಬಂದಿ ಸ್ಪಂದಿಸಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.
ಅಜಿತ ನಾಯಿಕ,ರಮೇಶ ಮಗದುಮ್ಮ,ಸಂಜಯ ಮುತ್ನಾಳ,ಮಹಾಂತೇಶ ಜೇಡರ,ಗಂಗವ್ವ ಮಗದುಮ್ಮ ಮತ್ತು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Back To Top