ಗ್ರಾ.ಪಂ. ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ

ತೆಲಸಂಗ: ಗ್ರಾಮದಲ್ಲಿ ಹೆಚ್ಚುತ್ತಿರುವ ಅಸ್ವಚ್ಛತೆಗೆ ಬೇಸತ್ತ ಮಹಿಳೆಯರು ಸೋಮವಾರ ಗ್ರಾ.ಪಂ. ಸಿಬ್ಬಂದಿಯನ್ನು ಹೊರಹಾಕಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಸ್ಥಳೀಯ ವಿವೇಕಾನಂದ ನಗರದ ರಸ್ತೆ ಮೇಲೆ ಕೊಳಚೆ ನೀರು ಬರುತ್ತಿದೆ. ಸಮಸ್ಯೆ ಬಗ್ಗೆ ಗ್ರಾ.ಪಂ.ಗೆ ಎಷ್ಟೋ ಬಾರಿ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ಪಿಡಿಒ ಗ್ರಾಮ ಪಂಚಾಯಿತಿಗೆ ಬರುವುದೇ ಇಲ್ಲ. ಇಂತಹ ಪಿಡಿಒ ನಮ್ಮೂರಿಗೆ ಬೇಡ. ಜನರೊಂದಿಗೆ ಸ್ಪಂದನೆ ಇಲ್ಲದ ಪಿಡಿಒರಿಂದ ಗ್ರಾಮದ ಅಭಿವೃದ್ಧಿ ಕುಂಟಿತಗೊಂಡಿದ್ದಲ್ಲದೆ, ಸ್ವಚ್ಛತೆ ಕೈಗೊಳ್ಳದ್ದರಿಂದ ಸಾಂಕ್ರಾಮಿಕ ರೋಗ ಹರಡಿ ಆಸ್ಪತ್ರೆಗೆ ಹಣ ಸುರಿಯಬೇಕಾದ ಪ್ರಸಂಗ ಬಂದಿದೆ ಎಂದು ಆಕ್ರೋಶ ಹೊರಹಾಕಿದರು.

ತುಂಬಿ ನಿಂತ ಗಟಾರಗಳಿಂದ ವಿಪರೀತ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಸದ್ಯಕ್ಕೆ ನಮಗೆ ನಿಮ್ಮ ಸಮಾಧಾನದ ಉತ್ತರ ಬೇಕಿಲ್ಲ. ಕೆಲಸ ಪ್ರಾರಂಬಿಸಿ ಎಂದು ಗ್ರಾಪಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳಕ್ಕೆ ಆಗಮಿಸಿದ ಪಿಡಿಒ ಬೀರಪ್ಪ ಕಡಗಂಚಿ ಅವರನ್ನು ಕಾರ್ಯಾಲಯದ ಒಳಗೆ ಹೋಗಲು ಬಿಡದ ಮಹಿಳೆಯರು, ರಸ್ತೆ ಮೇಲೆ ಕೊಳಚೆ ನೀರು ನಿಂತ ಸ್ಥಳಕ್ಕೆ ಕರೆದೊಯ್ದರು. ನೀವೆಲ್ಲ ಸಹಕಾರ ಕೊಟ್ಟರೆ ಖಂಡಿತ ನಾನು ಕೆಲಸ ಮಾಡಿಸುವೆ ಎಂದು ಪಿಡಿಒ ಹೇಳಿದರು. ಅದಕ್ಕೆ ಮತ್ತಷ್ಟು ಖಾರವಾದ ಗ್ರಾಮಸ್ಥರು, ಈ ನಾಟಕ ಬೇಕಿಲ್ಲ. ಎರಡು ವರ್ಷದಿಂದ ಇದೇ ಮಾತು ಕೇಳುತ್ತಿದ್ದೇವೆ. ಈಗ ಚಿಕೂನ್‌ಗುನ್ಯಾ ಬಂದಿದೆ. ಯಾರಿಗಾದರೂ ಡೆಂೆ ಬಂದರೆ ಚಿಕಿತ್ಸೆಗಾಗಿ ಎಲ್ಲಿಂದ ಹಣ ತರೋಣ ಎಂದು ಅಳಲು ತೋಡಿಕೊಂಡರು.