ಗೂಂಡಾ ಕಾಯ್ದೆ ಅನ್ವಯಿಸಿ ಮೂವರು ಜೂಜುಕೋರರ ಬಂಧನ

ಬೆಳಗಾವಿ: ಬೈಲಹೊಂಗಲ ತಾಲೂಕಿನ ನೇಸರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಮೂವರ ಮೇಲೆ ಜಿಲ್ಲಾ ಪೊಲೀಸರು ಗೂಂಡಾ ಕಾಯ್ದೆ ಅನ್ವಯಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ಕಲ್ಲಪ್ಪ ಭೀಮರಾಯಪ್ಪ ತೊಪಗಿ (50), ನಾಗನೂರ ಗ್ರಾಮದ ಕಲ್ಲಪ್ಪ ಮಲ್ಲಪ್ಪ ಸುಂಕದ (50), ಯರಗುದ್ದಿ ಗ್ರಾಮದ ರಮೇಶ ಅಡಿವೆಪ್ಪ ಕಬ್ಬೂರ (28)ಗೂಂಡಾ ಕಾಯ್ದೆಯಡಿ ಬಂಧಿತರು.

ನೇಸರಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಬಂಧಿತರು ನಿರಂತರವಾಗಿ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಬಂಧಿತರ ಮೇಲೆ ತಲಾ 10 ರಿಂದ 15 ಕೇಸ್‌ಗಳು ದಾಖಲಾಗಿದ್ದವು.ಇದನ್ನು ಪರಿಗಣಿಸಿದ ಎಸ್‌ಪಿ ಸುಧೀರಕುಮಾರ ರೆಡ್ಡಿ ವರದಿಯನ್ನು ಜಿಲ್ಲಾಧಿಕಾರಿಗೆ ರವಾನಿಸಿ ಗೂಂಡಾ ಕಾಯ್ದೆ ಅನ್ವಯಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.

ಎಸ್‌ಪಿ ಸಲ್ಲಿಸಿದ ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅ.10ರಂದು ಗೂಂಡಾ ಕಾಯ್ದೆ ಅನ್ವಯಿಸಿ ಕ್ರಮ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದ್ದರು. ಅದರಂತೆ ಜಿಲ್ಲಾ ಪೊಲೀಸರು ಅ.11ರಂದು ಆರೋಪಿಗಳನ್ನು ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ ಎಂದು ಎಸ್‌ಪಿ ಸುಧೀರಕುಮಾರ ರೆಡ್ಡಿ ತಿಳಿಸಿದ್ದಾರೆ.