ಅತ್ಯಾಕರ್ಷಕ ರೂಪಕಗಳಿಗೆ ನಗದು ಪುರಸ್ಕಾರ

ಬೆಳಗಾವಿ: ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಅತ್ಯಾಕರ್ಷಕ ರೂಪಕ ವಾಹನಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದ್ದಾರೆ.

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಆಚರಣೆಯ ಉಪಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೂಪಕ ವಾಹನಗಳಿಗೆ ಮೊದಲ ಬಹುಮಾನ 10 ಸಾವಿರ ರೂ., ದ್ವಿತೀಯ ಬಹುಮಾನ 7 ಸಾವಿರ ರೂ. ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ನಗದು ನೀಡಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆ ಸುವರ್ಣ ವಿಧಾಸೌಧ, ಬುಡಾ ಹಲಸಿ, ಗಂಗಾಂಬಿಕಾ ಐಕ್ಯ ಸ್ಥಳ, ಕೆಎಸ್‌ಆರ್‌ಟಿಸಿ ಯಲ್ಲಮ್ಮ ದೇವಸ್ಥಾನ, ಅರಣ್ಯ ಇಲಾಖೆ ಭೀಮಗಡ, ಅಬಕಾರಿ ಇಲಾಖೆ ಸವದತ್ತಿ ಕೋಟೆ, ಸಮಾಜ ಕಲ್ಯಾಣ ಇಲಾಖೆ ಪಾರ್ಲಿಮೆಂಟ್ ಭವನ ಸೇರಿ ಇತರ ಇಲಾಖೆಗಳು ಒಂದೊಂದು ರೀತಿಯ ರೂಪಕವಾಹನಗಳನ್ನು ಸಿದ್ಧಿಪಡಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.

ಕನ್ನಡ ಸಂಘಟನೆಗಳ ಕ್ರಿಯಾ ಸಮೀತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ದೇಶದಲ್ಲಿ ಮೊಟ್ಟಮೊದಲ ಮಹಿಳಾ ಸೈನ್ಯ ಕಟ್ಟಿದ್ದ ವೀರರಾಣಿ ಬೆಳವಡಿ ಮಲ್ಲಮ್ಮನ ಪ್ರತೀಕವಾಗಿ ಆಕೆಯ ಸೈನ್ಯದ ಸ್ತಬ್ದಚಿತ್ರ ಮಾಡುವಂತೆ ಸಲಹೆ ನೀಡಿದರು. ಅಲ್ಲದೆ ಉತ್ತಮ ರೂಪಕಗಳಿಗೆ ಖಾಸಗಿಯಾಗಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ 15 ಪ್ರತ್ಯೇಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಘೋಷಿಸಿದರು.

ಮಾಜಿ ಮಹಾಪೌರ ಡಾ. ಸಿದ್ದನಗೌಡ ಪಾಟೀಲ, ದೀಪಕ ಗುಡಗನಟ್ಟಿ, ಅನಂತಕುಮಾರ ಬ್ಯಾಕೂಡ, ಮಲ್ಲೇಶ ಚೌಗುಲೆ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಉಪನಿರ್ದೇಶಕಿ ಎಸ್.ಎಸ್.ಬಳ್ಳಾರಿ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಶಶಿಧರ ನಾಡಗೌಡ, ಶ್ರೀನಾಥ ಕಡೋಲಕರ ಹಾಗೂ ವಿವಿಧ ಇಲಾಖೆಯ ಹಲವು ಅಧಿಕಾರಿಗಳು ಭಾಗವಹಿಸಿದ್ದರು.