ಚಾಲನೆ ಪತ್ರ ಇಲ್ಲವೆಂದು ವಿಮೆ ಪರಿಹಾರ ನಿರಾಕರಿಸುವಂತಿಲ್ಲ

ಬೆಳಗಾವಿ: ಇನ್ನು ಮುಂದೆ ರಸ್ತೆ ಅಪಘಾತಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ವಾಹನ ಚಾಲನೆ ಪರವಾನಿಗೆ ಪತ್ರ (ಲೈಸೆನ್ಸ್) ಇಲ್ಲ ಎಂದು ಸಂತ್ರಸ್ತರಿಗೆ ಪರಿಹಾರ ನಿರಾಕರಿಸುವಂತಿಲ್ಲ. ಅಪಘಾತದಲ್ಲಿ ನೊಂದವರಿಗೆ ಸಂಬಂಧಿಸಿದ ವಿಮಾ ಕಂಪನಿ ಪರಿಹಾರ ಪಾವತಿಸಲೇಬೇಕು.

2018 ಸೆ.3ರಂದು ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಮಹಿಳೆಯೊಬ್ಬಳಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಸಿದ ಪ್ರಕರಣದ ವಿಚಾರಣೆ ನಡೆಸಿದ 10ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಯಶವಂತ ಅವರು ಸಾಕ್ಷಿ ಮತ್ತು ವಾದ-ವಿವಾದ ಆಲಿಸಿ ಲೈಸೆನ್ಸ್ ಇಲ್ಲ ಎಂದು ಕಾರಣದಿಂದ ಪರಿಹಾರ ನಿರಾಕರಿಸಬಾರದು. ಅಪಘಾತದಲ್ಲಿ ನೊಂದವರಿಗೆ ಸಂಬಂಧಿಸಿದ ವಿಮಾ ಕಂಪನಿ ಶೇ.6ರಷ್ಟು ಬಡ್ಡಿಯೊಂದಿಗೆ ಒಂದು ತಿಂಗಳಲ್ಲಿ 2.72 ಲಕ್ಷ ರೂ.ಪರಿಹಾರ ಪಾವತಿಸಬೇಕು ಎಂದು ಆದೇಶ ಹೊರಡಿಸಿದ್ದರು.

2014ರ ನ.7 ರಂದು ಮುರಗೋಡ ಗ್ರಾಮದ ಸಿದ್ದವ್ವ ನಾಗಪ್ಪ ಕರಿಗಾರ ಎಂಬ ಮಹಿಳೆ ಬೈಕ್ ಡಿಕ್ಕಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಮಹಿಳೆ ಶಸ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಈ ಕುರಿತು ಪರಿಹಾರ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಯಶವಂತ ತಾವರೆ ಅವರು, 2018ರ ಆ.8ರ ಸುಪ್ರೀಂ ಕೋರ್ಟ್ ಮೇಲ್ಮನವಿಯ ತೀರ್ಪು ಆಧಾರವಾಗಿಟ್ಟುಕೊಂಡು, ಲೈಸೆನ್ಸ್ ಇಲ್ಲ ಎಂದು ತಾಂತ್ರಿಕ ಕಾರಣ ಮುಂದಿಟ್ಟು ವಿಮಾ ಕಂಪನಿಗಳು ನೊಂದವರಿಗೆ ಪರಿಹಾರ ನೀಡಲು ಹಿಂದೇಟು ಹಾಕುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಇಂತಹ ತೀರ್ಪು ರಾಜ್ಯದಲ್ಲಿಯೇ ಮೊದಲು ಎಂದು ಅರ್ಜಿದಾರರನ ಪರ ವಕಾಲತ್ತು ವಹಿಸಿದ್ದ ನ್ಯಾಯವಾದಿ ಎನ್.ಆರ್.ಲಾತೂರ್ ತಿಳಿಸಿದ್ದಾರೆ.

2008ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗೋಕಾಕ ತಾಲೂಕಿನ ಧರ್ಮಟ್ಟಿ ಗ್ರಾಮದ ಶಂಕರ ಪತ್ತಾರ ಎಂಬುವವರು ಮೃತಪಟ್ಟಿದ್ದರು. ಮೃತನ ತಂದೆ ವಿಮೆ ಕಂಪನಿಯಿಂದ ಪರಿಹಾರ ಕೋರಿ 2010 ಜು.21 ರಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು. ಆ ವೇಳೆ ವಿಚಾರಣೆ ನಡೆಸಿದ ನ್ಯಾಯಾಲವು ಲೈಸೆನ್ಸ್ ಇಲ್ಲ ಎನ್ನುವ ಕಾರಣದಿಂದ ಪರಿಹಾರ ನಿರಾಕರಿಸುವಂತಿಲ್ಲ ಎಂದು ತೀರ್ಪು ನೀಡಿದ್ದರು. ಆದರೆ,ನ್ಯಾಯಾಲಯದ ತೀರ್ಪಿನ ವಿರುದ್ಧ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಹೋಗಿದ್ದರು. ಈ ಕುರಿತು 2016ರ ಸೆ.14ರಂದು ತೀರ್ಪು ಪ್ರಕಟಿಸಿದ್ದ ಹೈಕೋರ್ಟ್ ಲೈಸೆನ್ಸ್ ಇಲ್ಲದ ಸಂದರ್ಭದಲ್ಲಿ ಪರಿಹಾರ ನೀಡುವಂತೆ ವಿಮಾ ಕಂಪನಿಗಳಿಗೆ ಕೆಳ ಹಂತದ ನ್ಯಾಯಾಲಯ ಆದೇಶಿಸುವಂತಿಲ್ಲ. ಸುಪ್ರೀಂ ಕೋರ್ಟ್ ಮಾತ್ರ ನ್ಯಾಯ ನೀಡಲು ಸಾಧ್ಯ ಎಂದು ಉಲ್ಲೇಖಿಸಿದ್ದರು. ಹೈಕೋರ್ಟ್ ತೀರ್ಪಿನ ವಿರುದ್ಧ 2017ರಲ್ಲಿ ಅರ್ಜಿದಾರ ಶಾಮಣ್ಣ ಪತ್ತಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 2018ರ ಆ.8ರಂದು ದಿವಾಣಿ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದು ಇಂತಹ ಪ್ರಕರಣಗಳಲ್ಲಿ ಕೆಳ ಹಂತದ ನ್ಯಾಯಾಲಯಗಳೂ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿವೆ ಎಂದು ತಿಳಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ನೊಂದವರು ಪರಿಹಾರದಿಂದ ವಂಚಿತರಾಗಬಾರದು ಎಂದು ಸಾಮಾಜಿಕ ಕಳಕಳಿ ಹೊಂದಿ ನ್ಯಾಯಾಲಯ ತೀರ್ಪು ನೀಡಿದೆ. ವಾಹನ ಸವಾರರು ಕಡ್ಡಾಯವಾಗಿ ಲೈಸೆನ್ಸ್ ಹೊಂದಿರಬೇಕು.
– ಎನ್.ಆರ್.ಲಾತೂರ. ನ್ಯಾಯವಾದಿ