ಸಿಎಂ ಭತ್ತ ನಾಟಿ ಪ್ರಹಸನ

ಚಿಕ್ಕೋಡಿ: ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ಸಿಎಂ ಕುಮಾರಸ್ವಾಮಿ ಭತ್ತ ನಾಟಿ ಮಾಡಿದ್ದು ಕೇವಲ ನಾಟಕೀಯ ನಡೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಲೇವಡಿ ಮಾಡಿದ್ದಾರೆ.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವಾಗಲೋ ಒಮ್ಮೆ ಭತ್ತ ನಾಟಿ ಮಾಡಿದರೆ ರೈತನಾಗುವುದಿಲ್ಲ. ವಾರದಲ್ಲಿ ಮೂರು ದಿನವಾದರೂ ಕೃಷಿ ಚಟುವಟಿಕೆ ಮಾಡಬೇಕು ಎಂದು ತಿವಿದರು. ಕುಮಾರಸ್ವಾಮಿ ಸಿಎಂ ಆದ ಮೇಲೆ ಬಜೆಟ್‌ನಲ್ಲಿ ಅನ್ಯಾಯ ಮಾಡಿದ್ದಷ್ಟೇ ಅಲ್ಲದೆ ಬೆಳಗಾವಿಯಲ್ಲಿನ ಕೆಶಿಪ್ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಆರೋಪಿಸಿದರು.

ಜಾಗತಿಕ ಬ್ಯಾಂಕ್ ಹೇಳಿದ ಪ್ರಕಾರ ಕೆಶಿಪ್ ಕಚೇರಿ ಸ್ಥಳಾಂತರ ಮಾಡಲಾಗಿದೆ ಎನ್ನುವುದಾದರೆ ಆ ಬಗ್ಗೆ ಪ್ರಕಟಣೆ ನೀಡಿ ಎಂದ ಅವರು, ಎಚ್.ಡಿ.ರೇವಣ್ಣ ಅವರು ಹಾಸನ ಮತ್ತು ಹೊಳೆನರಸಿಪುರಕ್ಕೆ ಮಾತ್ರ ಸಚಿವರಲ್ಲ, ಇಡೀ ರಾಜ್ಯಕ್ಕೆ ಅನ್ನೋದನ್ನು ಅರಿತುಕೊಳ್ಳಬೇಕೆಂದು ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ಮಾಡಲು ಆಗದೆ ಇದ್ದಲ್ಲಿ ಕ್ಷಮಾಪಣೆ ಪತ್ರ ಹೊರಡಿಸಿ ರಾಜ್ಯದ ಜನರ ಕ್ಷಮೆ ಕೇಳಲಿ. ಸರ್ಕಾರದ ಸ್ಥಿತಿ ಕುಣಿಯಲು ಬಾರದವರಿಗೆ ನೆಲ ಡೊಂಕು ಎನ್ನುವಂತಾಗಿದೆ ಎಂದು ಕುಮಾರಸ್ವಾಮಿ ಆಡಳಿತ ವೈಖರಿ ವಿರುದ್ಧ ಕಿಡಿಕಾರಿದರು.

ಸರ್ಕಾರ ಬೀಳಿಸುವ ಗೋಜಿಗೆ ಬಿಜೆಪಿ ಹೋಗುವುದಿಲ್ಲ. ನಾವು ವಿರೋಧ ಪಕ್ಷದಲ್ಲಿಯೇ ಇದ್ದು ಜನರಿಗೆ ಸರ್ಕಾರದ ಕಾರ್ಯವೈಖರಿ ಮನವರಿಕೆ ಮಾಡುತ್ತೇವೆ. ಸಚಿವ ಸಂಪುಟ ವಿಸ್ತರಣೆಯಾದರೆ ಅಸಮಾಧಾನ ಭುಗಿಲೆದ್ದು ಸರ್ಕಾರ ಬಿದ್ದು ಹೋಗುತ್ತದೆ ಎಂಬ ಭಯದಿಂದ ಸಂಪುಟ ವಿಸ್ತರಣೆ ಮಾಡುತ್ತಿಲ್ಲ.
ಜಗದೀಶ ಶೆಟ್ಟರ್ ಮಾಜಿ ಸಿಎಂ