ಬೆಳಗಾವಿ ಸಹೋದರ ಸತೀಶಗೆ ಸಚಿವ ಸ್ಥಾನ ಕೇಳಿಲ್ಲ

ಬೆಳಗಾವಿ: ವಾಲ್ಮೀಕಿ ಸಮುದಾಯಕ್ಕೆ ಇನ್ನೂ ಎರಡು ಸಚಿವ ಸ್ಥಾನ ಕೇಳಿದ್ದೇವೆ. ಆದರೆ ನನ್ನ ಸಹೋದರ ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿ ಎಂದು ಕೇಳಿಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇರಿಸಿದ್ದೇವೆ. ಇದರಲ್ಲಿ ತಮ್ಮ ಸಹೋದರನಿಗೆ ಸಚಿವ ಸ್ಥಾನ ಬೇಕು ಎಂಬ ಉದ್ದೇಶವಿಲ್ಲ.

ನಾನು ಸಚಿವನಾದರೂ ಒಂದೇ, ಸತೀಶ ಜಾರಕಿಹೊಳಿ ಸಚಿವನಾದರೂ ಒಂದೇ. ಬಳ್ಳಾರಿಯ ರೆಡ್ಡಿ ಸಹೋದರರಂತೆ ಜಾರಕಿಹೊಳಿ ಸಹೋದರರಲ್ಲ. ನಡೆಯುವಾಗ ಅತೀ ಮಾಡಿದರೆ ದೇವರು ಏನೆಂಬುದನ್ನು ತೋರಿಸುತ್ತಾನೆ. ಅಧಿಕಾರ ಇದ್ದಾಗ ಸಮಾಜ ಮತ್ತು ಜನಸಾಮಾನ್ಯರ ಒಳತಿಗಾಗಿ ದುಡಿಯಬೇಕು ಅಷ್ಟೇ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಶಾಸಕ ಉಮೇಶ ಕತ್ತಿ ಇದ್ದರು.