ಬೋರಗಾಂವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಬೋರಗಾಂವ: ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಸ್ಥಳೀಯ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಶುಕ್ರವಾರ ಕರೆ ನೀಡಿದ್ದ ಬೋರಗಾಂವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮುಖಂಡ ಉತ್ತಮ ಪಾಟೀಲ ನೇತೃತ್ವದಲ್ಲಿ ಕಾರ್ಮಿಕರು ಬೆಳಗ್ಗೆಯೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಬಸ್ ನಿಲ್ದಾಣ ಬಳಿಯ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ಬಂದ್ ಮಾಡಿದರು. ಮುಖಂಡ ಉತ್ತಮ ಪಾಟೀಲ ಮಾತನಾಡಿ, ಪೌರ ಕಾರ್ಮಿಕರಿಗೆ ಕಳೆದ 14 ತಿಂಗಳಿನಿಂದ ವೇತನ ನೀಡಿಲ್ಲ. ವೇತನ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಚಿವರು ಈ ಬಗ್ಗೆ ಪರಿಶೀಲಿಸುವಂತೆ ಆದೇಶ ಹೊರಡಿಸಿದರೂ ಅಧಿಕಾರಿಗಳ ನಿರ್ಲಕ್ಷೃದಿಂದ ಕಾರ್ಮಿಕರು ಪರದಾಡುತ್ತಿದ್ದಾರೆ. ಕೂಡಲೇ ಸರ್ಕಾರ ಪೌರಕಾರ್ಮಿಕರ ಬಾಕಿ ವೇತನ ನೀಡಬೇಕು. 9 ದಿನಗಳಿಂದ ಕಾರ್ಮಿಕರು ಧರಣಿ ಸತ್ಯಾಗ್ರಹ ಕೈಗೊಂಡರೂ ಯಾವುದೇ ಅಧಿಕಾರಿ ಭೇಟಿ ನೀಡಿಲ್ಲ. ತಕ್ಷಣ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ.ಪಂ. ಅಧ್ಯಕ್ಷೆ ಶೋಭಾ ಗೋರವಾಡೆ ಮಾತನಾಡಿ, ಬೋರಗಾಂವ ಬಂದ್‌ಗೆ ನಾಗರಿಕರು ಬೆಂಬಲ ನೀಡಿದ್ದಾರೆ. ಕಾರ್ಮಿಕರ ಧರಣಿ ಸತ್ಯಾಗ್ರಹದಿಂದ ಪಟ್ಟಣದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅಸ್ವಚ್ಛತೆ ತಾಂಡವವಾಡುತ್ತಿದೆ. 9 ದಿನಗಳಿಂದ ನೀರು ಪೂರೈಕೆ ಆಗಿಲ್ಲ. ಬೀದಿ ದೀಪ ವ್ಯವಸ್ಥೆ ಇಲ್ಲ. ಹಾಗಾಗಿ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಕಾರ್ಮಿಕರ ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.

ಪ.ಪಂ. ಉಪಾಧ್ಯಕ್ಷ ವಸಂತ ಮಹಾಜನ, ಸದಸ್ಯ ಅಭಯಕುಮಾರ ಮಗದುಮ್ಮ, ಜೀವಂದರ ಪಾಟೀಲ, ಜೆ.ಜೆ.ಮಾಲಗಾಂವೆ, ತಾತ್ಯಾಸಾಹೇಬ ಬಸಣ್ಣವರ, ಬಾಬಾಸಾಬಹೇಬ ಪಾಟೀಲ, ಪಿಂಟು ಕಾಂಬಳೆ, ಅನಿಲ ಗುರವ, ದಿಗಂಬರ ಕಾಂಬಳೆ, ಸುಕುಮಾರ ಹಿರೇಮಣಿ, ಬಾಳು ಸಾತಪೂತೆ, ಸುಜಾತಾ ಪಾಟೀಲ, ಶೋಭಾ ಹವಲೆ ಹಾಗೂ ವಿವಿಧ ಸಂಘಟನೆಗಳು ಹಾಗೂ ಸ್ಥಳೀಯರು ಬಂದ್‌ನಲ್ಲಿ ಪಾಲ್ಗೊಂಡಿದ್ದರು. ಸದಲಗಾ ಪೊಲೀಸ್ ಠಾಣೆ ಉಪನಿರೀಕ್ಷಕ ಸಂಗಮೇಶ ದಿಡಗಿನಹಾಳ ಭದ್ರತೆ ಒದಗಿಸಿದ್ದರು.

ಶಾಲಾ-ಕಾಲೇಜುಗಳಿಗೆ ರಜೆ

ಬೋರಗಾಂವ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸಹಕಾರಿ ಸಂಘಗಳು, ಪತ್ತಿನ ಸಂಸ್ಥೆಗಳು, ಪಟ್ಟಣ ಪಂಚಾಯಿತಿ ಅಂಗಡಿಗಳನ್ನು ಸ್ವಯಂ ಪ್ರೇರಣೆಯಿಂದ ಮುಚ್ಚದ್ದವು. ವಿವಿಧ ಸಾಮಾಜಿಕ ಸಂಘಟನೆಗಳು,ನಾಗರಿಕರು, ಯುವಕರು ಬಂದ್‌ಗೆ ಬೆಂಬಲ ನೀಡಿದರು. ನಂತರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಬಿ.ದೇವಮಾನೆಗೆ ಮನವಿ ಸಲ್ಲಿಸಲಾಯಿತು.