ಆನಂದ ಅಪ್ಪುಗೋಳಗೆ ಜಾಮೀನು ನೀಡಬೇಡಿ

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳಗೆ ಜಾಮೀನು ನೀಡದಂತೆ ಒತ್ತಾಯಿಸಿ ಠೇವಣಿದಾರರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಠೇವಣಿದಾರ ಸುಜಿತ್ ಮುಳಗುಂದ ಮಾತನಾಡಿ, ಅಪ್ಪುಗೋಳ ಅವರು ಸಾವಿರಾರು ಜನರಿಗೆ ಕೊಡಬೇಕಾದ ಎಲ್ಲ ಠೇವಣಿ ಹಣ ನೀಡುವವರೆಗೂ ನ್ಯಾಯಾಲಯ ಜಾಮೀನು ನೀಡಬಾರದು. ಆ ಮೂಲಕ ಠೇವಣಿದಾರರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಭೀಮಾಂಬಿಕಾ ಕ್ರೆಡಿಟ್ ಸೌಹಾರ್ದ ಸೊಸೈಟಿ ಅಧ್ಯಕ್ಷೆ ಪ್ರೇಮಾ ಅಪ್ಪುಗೋಳಗೂ ಜಾಮೀನು ನೀಡಬಾರದು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಎರಡು ವರ್ಷದಿಂದ ನ್ಯಾಯ ದೊರಕಿಸಿಕೊಡಿ ಎಂದು ಪ್ರತಿಭಟನೆ ನಡೆಸಿ, ಸಾಕಷ್ಟು ಬಾರಿ ಮನವಿ ಮಾಡಿಕೊಂಡಾಗಲೂ ಇದುವರೆಗೂ ಯಾವುದೇ ಸೂಕ್ತ ಕ್ರಮ ಜರುಗಿಸಿಲ್ಲ. ಇದೀಗ ನಮಗೆ ನ್ಯಾಯ ಒದಗಿಸದೆ ಮತ್ತೆ ಅವರಿಗೆ ಜಾಮೀನು ನೀಡಿದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರಶಾಂತ ಸೈಬನ್ನವರ, ರಾಜು ಪಾಟೀಲ, ಅಹ್ಮದ್ ನದಾಫ್ ಹಾಗೂ ಕೃಷ್ಣ ವಸೂಜಿ ಮತ್ತಿತರರು ಇದ್ದರು.