ಬೆಳಗಾವಿ: ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಕೋಟ್ಯಂತರ ರೂ. ತೆರಿಗೆ ವಸೂಲಿ ಮಾಡುವಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿ, ಸಾಂಬ್ರಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ವಿಮಾನ ನಿಲ್ದಾಣ ಪ್ರಾಧಿಕಾರದವರು ಅಂದಾಜು 545 ಎಕರೆ ಆಸ್ತಿಯ ತೆರಿಗೆಯನ್ನು 2012ರಿಂದಲೇ ತುಂಬಬೇಕಿತ್ತು. ಆದರೆ, ನಿಲ್ದಾಣ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಕಾರಣಕ್ಕೆ ಕೆಲವು ವರ್ಷ ತೆರಿಗೆ ತುಂಬುವುದಕ್ಕೆ ಸರ್ಕಾರ ವಿನಾಯಿತಿ ಕೊಟ್ಟಿತ್ತು. 2017&18ನೇ ಸಾಲಿನಿಂದ ನಿಗದಿಪಡಿಸಿದ ತೆರಿಗೆಯಂತೆ ಈವರೆಗೆ ಬಡ್ಡಿಯೂ ಸೇರಿ 1.36 ಕೋಟಿ ರೂ. ತುಂಬಬೇಕಿತ್ತು.
ಈ ತೆರಿಗೆ ಪಾವತಿಸಲು ಸಾಂಬ್ರಾ ಗ್ರಾಪಂ ನೋಟಿಸ್ ನೀಡಿದರೂ ಸ್ಪಂದಿಸಿರಲಿಲ್ಲ. ಇದರಿಂದ ತೆರಿಗೆ ಕಟ್ಟದಿದ್ದರೆ ಎಲ್ಲ ಸೌಲಭ್ಯ ಕಡಿತಗೊಳಿಸಲಾಗುವುದು ಎಂದು ಗ್ರಾಪಂ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳು ಜಿಪಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು. ಕೋರ್ಟ್ನಲ್ಲಿ ಈ ಕುರಿತು ವಿಚಾರಣೆ ವೇಳೆ 4.30 ಲಕ್ಷ ರೂ. ಬಡ್ಡಿ ಬಿಟ್ಟು ತೆರಿಗೆ 1.31 ಕೋಟಿ ರೂ. ತೆರಿಗೆ ಪಾವತಿಸಲು ಒಪ್ಪಿಗೆ ಸೂಚಿಸಿ 65 ಲಕ್ಷ ರೂ. ಪಾವತಿಸಿದೆ. ಬಾಕಿ ತೆರಿಗೆ ಹಣ ಪಾವತಿಸಲು ನಾಲ್ಕು ದಿನ ಸಮಯ ಕೇಳಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ವರ್ಷ ಬೆಳಗಾವಿ ನಿಲ್ದಾಣ ಪ್ರಾಧಿಕಾರವು ಸಾಂಬ್ರಾ ಗ್ರಾಪಂಗೆ 43.93 ಲಕ್ಷ ರೂ. ತೆರಿಗೆ ಪಾವತಿಸಬೇಕು. ಅಲ್ಲದೆ, ಕಟ್ಟಡ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗಳ ಕುರಿತು ಅಲ್ಲದೆ, ವಿಮಾನ ನಿಲ್ದಾಣ ವಿಸ್ತರಣೆ ಬಗ್ಗೆ ಕೂಡ ಗ್ರಾಪಂ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲು ಗ್ರಾಪಂ ಆಡಳಿತ ಮಂಡಳಿಗೆ ಅಧಿಕಾರವಿದೆ ಎಂದು ಗ್ರಾಪಂ ಸದಸ್ಯರು ತಿಳಿಸಿದ್ದಾರೆ.