ಬೆಳಗಾವಿ: ಮತ್ತೆ ಮನೆ ಸೇರಿದ ಬಾಲಕ

ಬೆಳಗಾವಿ: ಮೊಬೈಲ್‌ನಲ್ಲಿ ಪಬ್ ಜಿ ಗೇಮ್ ಆಡದಂತೆ ಪಾಲಕರು ಗದರಿಸಿದ ಕಾರಣ ಬೇಸರಗೊಂಡು ಮನೆ ಬಿಟ್ಟುಹೋಗಿದ್ದ ಬಾಲಕ ಮೂರು ದಿನಗಳ ನಂತರ ಮತ್ತೆ ಮನೆ ಸೇರಿದ್ದಾನೆ.

ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮದಿಂದ ಗುರುವಾರ ಕಾಣೆಯಾಗಿದ್ದ ಬಾಲಕ ಪ್ರಥಮ ಕಾಂಬಳೆ(13) ಭಾನುವಾರ ಬೆಳಗ್ಗೆ ಪಾಲಕರ ಮಡಿಲು ಸೇರಿದ್ದಾನೆ. ಗುರುವಾರದಿಂದ ಶನಿವಾರ ಸಂಜೆವರೆಗೂ ಬೆಳಗಾವಿನಗರದ ಹಲವೆಡೆ ಕೆಲಸಮಾಡಿ ಹೊಟ್ಟೆ ತುಂಬಿಸಿಕೊಂಡಿದ್ದಾನೆ.

ಶನಿವಾರ ರಾತ್ರಿ ನಡೆದುಕೊಂಡು ಖಾನಾಪುರದತ್ತ ತೆರಳಿದ್ದು, ಬೆಳಗ್ಗೆ 8.15ರ ಸುಮಾರಿಗೆ ಸಮೀಪದ ಖಾನಾಪುರ ಗೇಟ್ ಬಳಿ ಬಾಲಕ ಅಲೆದಾಡುತ್ತಿದ್ದ. ಬಳಿಕ ಕಾಣೆಯಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಓದಿದ ಸಾರ್ವಜನಿಕರು ಪಾಲಕರಿಗೆ ಕರೆ ಮಾಡಿ ಬಾಲಕನನ್ನು ಒಪ್ಪಿಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.