ಮುಂದುವರಿದ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

ಬೆಳಗಾವಿ: ಕಬ್ಬಿನ ಬಾಕಿ ಬಿಲ್ ನೀಡುವುದು, ಕಬ್ಬಿನ ದರ ನಿಗದಿ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಭರವಸೆ ಈಡೇರಿಸದಿರುವುದನ್ನು ಖಂಡಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಭಾರತೀಯ ಕೃಷಿಕ ಸಮಾಜದ ಕಾರ್ಯಕರ್ತರ ಅಹೋರಾತ್ರಿ ಧರಣಿ ಭಾನುವಾರವೂ ಮುಂದುವರಿದಿದೆ.

ಡಿಸಿ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಭಾನುವಾರ ಕಬ್ಬು ಬೆಳಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ ಹಾಗೂ ವಿವಿಧ ರೈತಪರ ಸಂಘಟನೆಗಳ ಮುಖಂಡರು ಪಾಲ್ಗೊಂಡು ಬೆಂಬಲ ಸೂಚಿಸಿದರು. ಈಗಾಗಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಸಿ ಕಬ್ಬಿನ ಬಾಕಿ ಬಿಲ್‌ನ್ನು 15 ದಿನಗಳ ಒಳಗೆ ಸಕ್ಕರೆ ಕಾರ್ಖಾನೆಗಳಿಂದ ವಸೂಲಿ ಮಾಡಿಕೊಡಲಾಗುವುದು.

ಪ್ರಸಕ್ತ ಸಾಲಿನ ಕಬ್ಬಿಗೆ ದರ ನಿಗದಿ ಮಾಡುವ ಭರವಸೆ ನೀಡಿದರು. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಖಾನೆಗಳ ಹಿತರಕ್ಷಣೆಗಾಗಿ ಸರ್ಕಾರ ಕೆಲಸ ಮಾಡುತ್ತಿದೆಯೇ ಹೊರತು ರೈತರ ರಕ್ಷಣೆ ಮಾಡುತ್ತಿಲ್ಲ. 2013ನೇ ಸಾಲಿನಿಂದ ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಡಳಿತ ಮೂಲಕ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲವೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಚೂನಪ್ಪ ಪೂಜೇರಿ ಹಾಗೂ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ ಮಾತನಾಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಬೀದರ, ಹಳಿಯಾಳ ಜಿಲ್ಲೆಗಳಲ್ಲಿನ ಸಕ್ಕರೆ ಕಾರ್ಖಾನೆಗಳು ರೈತರೊಂದಿಗೆ ಒಪ್ಪಂದ ಮಾಡಿಕೊಂಡಂತೆ ಕಬ್ಬಿನ ಬಿಲ್ ನೀಡಿಲ್ಲ. ಎಫ್‌ಆರ್‌ಪಿ ದರವನ್ನು ಎಕ್ಸ್‌ಫಿಲ್ಡ್ ಘೋಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು. ಕಬ್ಬು ತೂಕದಲ್ಲಿ ಮೋಸ ತಪ್ಪಿಸಲು ಸರ್ಕಾರ ಎಪಿಎಂಸಿ ಮೂಲಕ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಯಂತ್ರಗಳನ್ನು ಅಳವಡಿಸಿಬೇಕು.

ಉತ್ತರ ಪ್ರದೇಶದ ಸರ್ಕಾರದ ಮಾದರಿಯಲ್ಲೇ ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿ ಮಾಡಬೇಕು. ಅಧಿವೇಶನದಲ್ಲಿ ಕಬ್ಬಿನ ಬಾಕಿ ಬಿಲ್ ವಸೂಲಿ ಮಾಡದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು. ರೈತ ಮಹಿಳೆ ಜಯಶ್ರೀ ಗುರಣ್ಣವರ, ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಲಿಂಗರಾಜ ಪಾಟೀಲ ಹಾಗೂ ಕಬ್ಬು ಬೆಳೆಗಾರರು, ರೈತ ಮುಖಂಡರು.