ಜಗದೀಶ ಹೊಂಬಳಿ ಬೆಳಗಾವಿ
ಜಿಲ್ಲೆಯಲ್ಲಿ ರಸ್ತೆ ಅಪಘಾತ ತಡೆಗಟ್ಟಬೇಕು ಎಂಬ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಕಮಿಟಿ ರಚಿಸಿ ಜಿಲ್ಲೆಯಲ್ಲಿ ರುವ ಬ್ಲಾೃಕ್ ಸ್ಪಾಟ್ (ಅಪಘಾತ ವಲಯ)ಗಳನ್ನು ಗುರುತಿಸುವ ಕಾರ್ಯ ಮಾಡಲಾಗಿದೆ. ಆದರೆ, ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಗುರುತಿಸಿರುವ ಬ್ಲಾೃಕ್ ಸ್ಪಾಟ್‌ಗಳನ್ನು ಸುಧಾರಣೆ ಮಾಡುವ ಗೋಜಿಗೆ ಹೋಗದೇ ಇರುವ ಕಾರಣಕ್ಕೆ ಅಪಘಾತಗಳಿಗೆ ಕೊನೆ ಇಲ್ಲದಂತಾಗಿದೆ.
ನಿತೇಶ ಪಾಟೀಲ ಜಿಲ್ಲಾಧಿಕಾರಿಯಾಗಿದ್ದಾಗ ಬ್ಲಾೃಕ್ ಸ್ಪಾಟ್ ಗುರುತಿಸುವುದಕ್ಕೆ ಸಿಪಿಐ, ಲೋಕೋಪಯೋಗಿ ಇಲಾಖೆ ಎಇಇ ಹಾಗೂ ಆರ್‌ಟಿಒ ಇನ್‌ಸ್ಪೆಕ್ಟರ್ ಒಳಗೊಂಡ ಕಮಿಟಿ ರಚನೆ ಮಾಡಲಾಗಿತ್ತು. ಈ ಕಮಿಟಿಗೆ ಬ್ಲಾೃಕ್‌ಸ್ಪಾಟ್ ಗುರುತಿಸುವ ಜವಾಬ್ದಾರಿ ನೀಡಲಾಗಿತ್ತು. ಮುಖ್ಯ ರಸ್ತೆಗಳ ಅಪಾಯಕಾರಿ ಜಂಕ್ಷನ್ ಹಾಗೂ ವೃತ್ತಗಳ ಸುಧಾರಣೆ, ರಸ್ತೆ ಹಂಪ್ಸ್, ಹಳ್ಳಗಳ ಬ್ರಿಡ್ಜ್, ಉದ್ದ-ಅಗಲವಾದ ತಿರುವು, ಕೆರೆ ದಂಡೆ ಗುರುತಿಸಿ ಅಪಘಾತ ತಡೆಗೆ ಯಾವೆಲ್ಲ ಮುನ್ನಚ್ಚರಿಕೆ ಕ್ರಮ ಅಗತ್ಯವೋ ಅವುಗಳನ್ನು ಸುಧಾರಿಸುವ ಹೊಣೆ ನೀಡಲಾಗಿತ್ತು. ಆದರೆ, ಈ ಯೋಜನೆ ಮಾತ್ರ ಇನ್ನುವರೆಗೂ ಸಮರ್ಪಕವಾಗಿ ಸಾಕಾರಗೊಳ್ಳದೇ ಇರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.
ಇತರ ಕಾರ್ಯಕ್ಕೆ ಅನುದಾನ ಬಳಕೆ:ಆರ್‌ಟಿಒ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಅಪಘಾತ ಸಂಭವಿಸುವ ಸ್ಥಳ ಗುರುತಿಸಿದ್ದಾರೆ. ಅಪಘಾತ ತಡೆಗಟ್ಟುವುದಕ್ಕೆ ಕೈಗೊಳ್ಳುವ ಕಾಮಗಾರಿಯ ಆ್ಯಕ್ಷನ್ ಪ್ಲಾೃನ್ ಅನುದಾನ ಕೊರತೆಯಿಂದ ಪೂರ್ಣಗೊಂಡಿಲ್ಲ. ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ಅಪಘಾತ ತಡೆಗಟ್ಟುವ ಕ್ರಮ ಕೈಗೊಳ್ಳುವುದಕ್ಕೆ ಬಿಡುಗಡೆಯಾಗಿದ್ದ 3 ಕೋಟಿ ರೂ. ಅನುದಾನ ರಸ್ತೆ ಸುರಕ್ಷತೆಯ ಇತರ ಕಾರ್ಯಕ್ರಮಗಳಿಗೆ ಬಳಕೆಯಾಗಿದೆ. ಆದರೆ, ಅಪಘಾತ ವಲಯಗಳ ಸುಧಾರಣೆಯಾಗಿಲ್ಲ.
ರಿಪ್ಲೆಕ್ಟರ್ ಇಲ್ಲದಕ್ಕೆ ಅಪಘಾತ ಹೆಚ್ಚಳ:ರಾಜ್ಯದಲ್ಲೇ ಅತೀ ಹೆಚ್ಚು ಸಕ್ಕರೆ ಕಾರ್ಖಾನೆಗಳು ಬೆಳಗಾವಿ ಜಿಲ್ಲೆಯಲ್ಲಿವೆ. ಕಬ್ಬು ಸಾಗಿಸುವುದಕ್ಕೆ ಟ್ರಾೃಕ್ಟರ್ ಟ್ರಾೃಲಿಗಳ ಹಿಂಬದಿಯಲ್ಲಿ ರಿಪ್ಲೆಕ್ಟರ್ ಅಳವಡಿಸಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) , ಪೊಲೀಸ್ ಇಲಾಖೆಯ ಜಾಗೃತಿ ಮಧ್ಯೆಯೂ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ 1,310ಕ್ಕೂ ಅಧಿಕ ರಸ್ತೆ ಅಪಘಾತ ಸಂಭವಿಸಿವೆ. 940ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಇಷ್ಟೊಂದು ಅಪಘಾತ ಪ್ರಕರಣಗಳು ಸಂಭವಿಸಿರುವುದು ಆತಂಕಕಾರಿ ಬೆಳವಣಿಗೆ. ಜಿಲ್ಲೆಯಲ್ಲಿ 69,792 ಟ್ರಾೃಕ್ಟರ್ ಟ್ರಾೃಲಿಗಳಿದ್ದು, ಕೆಲವರು ಮಾತ್ರ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಎಲ್ಲ ಟ್ರಾೃಕ್ಟರ್-ಟ್ರಾೃಲಿಗಳಿಗೆ ರಿಪ್ಲೆಕ್ಟರ್ ಅಳವಡಿಸುವ ಕಾರ್ಯವೂ ಕಟ್ಟುನಿಟ್ಟಿನಿಂದ ನಡೆಯಬೇಕಾಗಿದೆ ಎಂಬುವುದು ಸಾರ್ವಜನಿಕರ ಆಗ್ರಹ.
ಅಧಿಕಾರಿಗಳು ಬ್ಲಾೃಕ್ ಸ್ಪಾಟ್ ಪಟ್ಟಿ ಕೊಟ್ಟಿದ್ದಾರೆ. ಬ್ಲಾೃಕ್ ಸ್ಪಾಟ್ ಸುಧಾರಣೆಗೆ ಪ್ರಸ್ತಾವನೆ ಕಳುಹಿಸಲಾಗಿತ್ತು, ಅನುದಾನ ಬಿಡುಗಡೆಯಾಗಿಲ್ಲ. ಟಿ ಜಂಕ್ಷನ್ ಸೇರಿ ಅಪಘಾತ ವಲಯಗಳನ್ನು ಸುಧಾರಣೆ ಮಾಡುವುದಕ್ಕೆ ಅಂದಾಜು 10 ಕೋಟಿ ರೂ. ಅನುದಾನ ಬೇಕು. ಅನುದಾನ ಬಿಡುಗಡೆಯಾದ ಬಳಿಕ ಸುಧಾರಣೆ ಕಾಮಗಾರಿ ನಡೆಯುತ್ತದೆ. ಈ ಹಿಂದೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗುವ ಹಂತದಲ್ಲಿತ್ತು. ಬಿಡುಗಡೆಯಾಗಲಿಲ್ಲ.
ಎಸ್.ಎಸ್. ಸೊಬರದ, ಅಧೀಕ್ಷಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ, ಬೆಳಗಾವಿ