ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆ

ಬೆಳಗಾವಿ: 13 ವರ್ಷದ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ, ವಿಷ ಕುಡಿಸಿ ಕೊಲೆಗೆ ಯತ್ನಿಸಿದ ಅಪರಾಧಿಗೆ 3ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಪೊಕ್ಸೊ ಕಾಯ್ದೆಯಡಿ 10 ವರ್ಷ ಕಠಿಣ ಶಿಕ್ಷೆ ಹಾಗೂ 26 ಸಾವಿರ ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ.

ಗೋಕಾಕ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ರಾಮಪ್ಪ ಲಕ್ಕಪ್ಪ ದಂಡಿನ ಶಿಕ್ಷೆಗೊಳಗಾದವ. ಅಪರಾಧಿಯನ್ನು ಘಟಪ್ರಭಾ ಪೊಲೀಸರು ಹಿಂಡಲಗಾ ಜೈಲಿಗೆ ಕರೆದೊಯ್ದಿದ್ದಾರೆ.

ಪ್ರಕರಣದ ಹಿನ್ನೆಲೆ: ಗೋಕಾಕ ತಾಲೂಕಿನ ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯ ತುಕ್ಕಾನಟ್ಟಿ ಗ್ರಾಮದ ಅಪರಾಧಿಯು 2016ರ ಮಾರ್ಚ್ 8ರಂದು ಗ್ರಾಮದ ಮನೆಯೊಂದರಲ್ಲಿ ವಾಸವಾಗಿದ್ದ 13 ವರ್ಷದ ಬಾಲಕಿಯ ಮೇಲೆ ಬೆಳಗ್ಗಿನ ಜಾವ 3 ಗಂಟೆಯ ಸುಮಾರು ಅತ್ಯಾಚಾರವೆಸಗಿದ್ದ. ಅಲ್ಲದೇ ಆಕೆಗೆ ಕ್ರಿಮಿನಾಶಕ ಔಷಧ ಕುಡಿಸಿ ಕೊಲೆಗೆ ಯತ್ನಿಸಿದ್ದ. ಕೂಡಲೇ ಆಕೆಯ ತಾಯಿ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿದ್ದಳು.

ಈ ಬಾಲಕಿ ಬದುಕಿ ಉಳಿದಿದ್ದನ್ನು ಕಂಡ ಅಪರಾಧಿಯು ತಾಯಿಯ ಬಲ ರೆಟ್ಟೆಗೆ ಕಬ್ಬಿಣದ ಸಲಾಕೆಯಿಂದ ಬಡಿದು ಕೊಲೆ ಮಾಡಲು ಯತ್ನಿಸಿದ್ದ. ಈ ಪ್ರಕರಣ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣದ ಸಮಗ್ರ ತನಿಖೆ ನಡೆಸಿದ ಪೊಲೀಸರು ಸಾಕ್ಷ್ಯಾಧಾರಗಳ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 16 ಸಾಕ್ಷಿ ವಿಚಾರಣೆ, 26 ಕಾಗದ ಪತ್ರಗಳು ಹಾಗೂ 7 ಮುದ್ದೆಮಾಲುಗಳನ್ನು ಹಾಜರು ಪಡಿಸಲಾಗಿತ್ತು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಜಿ. ನಂಜುಂಡಯ್ಯ, ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.