ಹುಕ್ಕೇರಿ: ಬೆಳವಿ ಗ್ರಾಪಂ 4ನೇ ಸುತ್ತಿನ ಗ್ರಾಮಸಭೆ

ಹುಕ್ಕೇರಿ:  ತಾಲೂಕಿನ ಬೆಳವಿ ಗ್ರಾಮದ ಗ್ರಾಮಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ 4ನೇ ಸುತ್ತಿನ ಗ್ರಾಮಸಭೆ ಜರುಗಿತು.

ತಾ.ಪಂ ಸದಸ್ಯ ಬಾಳಾಸಾಹೇಬ ನಾಯಿಕ ಮಾತನಾಡಿ, ಶಾಲೆಯ ಕಟ್ಟಡ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮಕ್ಕಳಿಗೆ ಶೌಚಗೃಹ ಕೊರತೆಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಈಡೇರಿಸುವುದಾಗಿ ತಿಳಿಸಿದರು.

ಅಪ್ಪಾಸಾಹೇಬ ಸಾರಾಪುರೆ ಮಾತನಾಡಿ, ರೈತರು ಉದ್ಯೋಗ ಖಾತ್ರಿ ಯೋಜನೆಯಡಿ ಬದು, ಕೃಷಿ ಹೊಂಡ ನಿರ್ಮಾನ, ಜಮೀನು ಸಮತಟ್ಟುಗೊಳಿಸುವ ಕಾರ್ಯಕ್ರಮಗಳು ಸದುದ್ದೇಶದಿಂದ ಕೂಡಿರಲಿ ಎಂದರು.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಹಾಗೂ ಕಾಲೇಜಿನ ಮುಖ್ಯಸ್ಥರು ತಮ್ಮ ಶಾಲೆಯಲ್ಲಿರುವ ಶೌಚಗೃಹ ಹಾಗೂ ಕುಡಿಯುವ ನೀರಿನ ಸಮಸ್ಯೆ ಸಭೆಯ ಗಮನಕ್ಕೆ ತಂದರು. ಜತೆಗೆ ಕೊಠಡಿಗಳ ನಿರ್ಮಾಣದ ಅವಶ್ಯಕತೆ ತಿಳಿಸಿದರು.

ಗ್ರಾಪಂ ಅಧ್ಯಕ್ಷ ಥಳೆಪ್ಪ ದಂಡಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಪ್ಪ ನಾಯಿಕ, ರಾಮಣ್ಣ ತೇರದಾಳಿ, ಭೂಪಾಲ ನಾಯಿಕ, ಮಾಜಿ ಅಧ್ಯಕ್ಷ ಸಂಜೀವ ನಾಯಿಕ, ಕಾರ್ಯದರ್ಶಿ ವಿನಾಯಕ ನಾಯಿಕ, ಬಿ.ಬಿ.ಅಂಗಡಿ, ಎಸ್.ಎಂ.ಕಟಗೇರಿ, ರಫೀಕ್ ಅಹ್ಮದ್ ಮಕಾನದಾರ, ಮಹಾದೇವಿ ನಾಯಿಕ, ಅಂಗನವಾಡಿ ಕಾರ್ಯಕರ್ತೆರು ಇದ್ದರು. ಪಿಡಿಒ ಸಿ.ಎ.ಕೊಟಬಾಗಿ ಸ್ವಾಗತಿಸಿ, ವಂದಿಸಿದರು.

ವಸತಿ ಯೋಜನೆಯಡಿ 372 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಗ್ರಾಮದ 758 ಕುಟುಂಬಗಳು ಶೌಚಗೃಹ ನಿರ್ಮಿಸಿಕೊಂಡಿದ್ದು ಇನ್ನೂ 27 ಕುಟುಂಬಗಳ ಶೌಚಗೃಹ ನಿರ್ಮಾಣ ಕಾಮಗಾರಿ ನಡೆದಿದೆ.
|ಸಿ.ಎ.ಕೊಟಬಾಗಿ ಪಿಡಿಒ