ಯುವತಿ ಪ್ರೀತಿಸಿದ್ದಕ್ಕೆ ಕರೆಂಟ್​ ಶಾಕ್​ ನೀಡಿ ಯುವಕನ ಮರ್ಮಾಂಗ, ಕಿಡ್ನಿಗೆ ಹಾನಿ: ಕಾಂಗ್ರೆಸ್​ ಮುಖಂಡ ಕೈವಾಡ ಆರೋಪ

ಬೆಳಗಾವಿ: ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನಿಗೆ ಕರೆಂಟ್​ ಶಾಕ್​ ನೀಡಿ, ಆತನ ಮರ್ಮಾಂಗ ಹಾಗೂ ಕಿಡ್ನಿಗೆ ಹಾನಿ ಮಾಡಿ ಕಾಂಗ್ರೆಸ್​ ಮುಖಂಡ ಅಟ್ಟಹಾಸ ಮೆರೆದಿದ್ದಾನೆ ಎಂದು ಆರೋಪಿಸಿ ದೂರು ದಾಖಲಾಗಿರುವ ಘಟನೆ ಬೆಳಗಾವಿಯಲ್ಲಿ ಸೋಮವಾರ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಮಡಿವಾಳಿ ರಾಯಭಾಗಕರ(28) ಎಂದು ಗುರುತಿಸಲಾಗಿದ್ದು, ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಬೆಂಬಲಿಗನಾಗಿರುವ ಉಳವಯ್ಯ ಚಿಕ್ಕೊಪ್ಪ ಹಾಗೂ ಆತನ ಬೆಂಬಲಿಗರಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

ಯುವಕನನ್ನು ಬೆಳಗಾವಿಯಿಂದ ಅಪಹರಿಸಿ ಕಾಲಿಗೆ ಮೊಳೆ ಹೊಡೆದು ಕರೆಂಟ್‌ ಶಾಕ್ ನೀಡಿ, ಮರ್ಮಾಂಗವನ್ನು ಜಜ್ಜಿದ್ದಾರೆ. ಉಳವಯ್ಯ ಚಿಕ್ಕೊಪ್ಪ ಎಂಬಾತನ ಮಗಳನ್ನು ಪ್ರೀತಿಸಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

ಎರಡು ವರ್ಷಗಳ ಹಿಂದೆ ಯುವಕನ ಮನೆಯವರ ಮೇಲೆ ಹಲ್ಲೆ ನಡೆಸಿ, ಆಸ್ತಿ ಬರೆಸಿಕೊಂಡು‌ ಊರು ಬಿಡಿಸಿದ್ದರು ಎಂಬ ಆರೋಪವೂ ಉಳವಯ್ಯ ಚಿಕ್ಕೊಪ್ಪ ಮೇಲಿದೆ. ಯುವಕ ಮೂಲತಃ ಧಾರವಾಡ ಸಮೀಪದ ಗರಗ ಗ್ರಾಮದವನಾಗಿದ್ದು, ಗ್ರಾಮ ಬಿಟ್ಟು ಆತನ ಕುಟುಂಬ ಸದ್ಯ ಬೆಳಗಾವಿಯಲ್ಲಿ ನೆಲೆಸಿದೆ.

ಧಾರವಾಡ ಶಾಸಕ ಅಮೃತ ದೇಸಾಯಿ ಹಾಗೂ ಬೆಳಗಾವಿ ಶಾಸಕ ಅನಿಲ ಬೆನಕೆ ಅವರು ಬೆಳಗಾವಿಗೆ ಧಾವಿಸಿ ಬಂದು ಪೊಲೀಸ್​ ಆಯುಕ್ತರನ್ನು ಭೇಟಿ ಮಾಡಿ, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಯುವಕ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಈ ಸಂಬಂಧ ಬೆಳಗಾವಿಯ ಮಾಳಮಾರುತಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *