ಕೈ ಹಿಡಿದ ಕೈ ಚೀಲ

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಚಿದಂಬರ ನಗರದ ರೇಣುಕಾ ರಾಮಕೃಷ್ಣ ನವಾಳೆ ಅವರ ಪ್ರಯತ್ನ ಭಿನ್ನ ಮತ್ತು ಇತರರಿಗೆ ಮಾದರಿ.

|ಚಂದ್ರಹಾಸ ಚಾರ್ಮಾಡಿ

ಪ್ರತಿಬಾರಿ ಅಂಗಡಿಯಿಂದ ಬರುವಾಗ ಕನಿಷ್ಠ ನಾಲ್ಕೈದಾದರೂ ಪ್ಲಾಸ್ಟಿಕ್ ಕವರ್​ಗಳು ಮನೆ ಸೇರುತ್ತಿದ್ದವು. ‘ಹೀಗೆಯೇ ಮುಂದುವರಿದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಎಲ್ಲಿಡುವುದು? ಎಲ್ಲರೂ ಕಸಕ್ಕೆ ಎಸೆದರೆ ಅದು ಭೂಮಿಯನ್ನೇ ತುಂಬಿ ಬಿಡಬಹುದಲ್ಲವೇ? ಇದಕ್ಕೆ ಅಂತ್ಯವೇ ಇಲ್ಲವೇ’ ಎಂದು ಯೋಚಿಸುತ್ತಿದ್ದ ರೇಣುಕಾ ಸದಾಕಾಲ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆಯೇ ಮನೆಯಲ್ಲಿ ಏನಾದರೊಂದು ಮಾತುಗಳನ್ನು ಹೇಳುತ್ತಿದ್ದರು. ಇವರ ಕಾಳಜಿ ಕಂಡ ಮಗ ಹೊಸ ಯೋಚನೆಯನ್ನು ಮುಂದಿರಿಸಿದರು. ಅದುವೇ ಬಟ್ಟೆಯಿಂದ ಕೈಚೀಲ ತಯಾರಿ. ಹೀಗೆ ಬಟ್ಟೆ ಕೈಚೀಲ ತಯಾರಿಕೆಗೆ ಕಾರ್ಯಪ್ರವೃತ್ತರಾದ ಸವದತ್ತಿ ತಾಲೂಕಿನ ಚಿದಂಬರ ನಗರದ ರೇಣುಕಾ ರಾಮಕೃಷ್ಣ ನವಾಳೆ ಈಗ ಬಿಡುವಿಲ್ಲದ ಸ್ವಉದ್ಯೋಗಿ.

ಕೈಚೀಲ ತಯಾರಿಸಲು ಬಿಡುವಿನ ವೇಳೆಯನ್ನು ಮೀಸಲಿರಿಸುವ ನಿರ್ಧಾರಕ್ಕೆ ಬಂದ ರೇಣುಕಾ ದೂರದ ಗುಜರಾತ್​ನಿಂದ ಕಚ್ಚಾವಸ್ತು ತರಿಸುವ ಜವಾಬ್ದಾರಿಯನ್ನು ಮಗನಿಗೆ ನೀಡಿದರು. ತಾವು ಇಂಟರ್​ನೆಟ್ ಲೇಖನಗಳ ಮೂಲಕ ಮಾಹಿತಿಯನ್ನು ಕಲೆ ಹಾಕಿದರು. ಮಾರುಕಟ್ಟೆ ಹುಡುಕಿಕೊಡುವುದಾಗಿ ಮಗ ಧೈರ್ಯ ತುಂಬಿದರು. ಆನ್​ಲೈನ್ ಮೂಲಕ ಬುಕ್ ಮಾಡಿದ ಕಚ್ಚಾವಸ್ತುಗಳು ಮನೆಗೆ ಸೇರಿ ಕೆಲಸವೂ ಶುರುವಾಯಿತು. ವಿವಿಧ ಗಾತ್ರಗಳಲ್ಲಿ ಬಟ್ಟೆಯ ಕೈಚೀಲಗಳನ್ನು ಸಿದ್ಧಪಡಿಸಿದರು. ಚೀಲವನ್ನು ಹಿಡಿದುಕೊಳ್ಳಲು ಬೇಕಾದಷ್ಟೇ ಗಾತ್ರಕ್ಕೆ ಪ್ಲಾಸ್ಟಿಕ್ ನೂಲನ್ನು ಉಪಯೋಗಿಸಿದರು. ಒಂದೇ ವಾರದಲ್ಲಿ ಬೇರೆ ಬೇರೆ ಗಾತ್ರದ ನೂರಾರು ಚೀಲಗಳು ಮಾರಾಟಕ್ಕೆ ಸಿದ್ಧಗೊಂಡವು. ಆರಂಭದಲ್ಲಿ ಊರಿನ ಅಂಗಡಿಗಳಿಗೆ ನೀಡಿದರು. ಇದರಿಂದಾಗಿ ಕ್ರಮೇಣ ಪುಟ್ಟ ಪ್ಲಾಸ್ಟಿಕ್ ಚೀಲಗಳ ಬಳಕೆ ಕಡಿಮೆಯಾಯಿತು. ದಿನಕಳೆದಂತೆ ಬೇಡಿಕೆ ಹೆಚ್ಚಾಗತೊಡಗಿತು. ದೂರದ ಕಾರವಾರ, ಕುಮಟಾ, ಶಿರಸಿಯಿಂದಲೂ ಬೇಡಿಕೆ ಬರತೊಡಗಿತು.

ಉದ್ಯೋಗದಾತೆ

ಗ್ರಾಮಾಭಿವೃದ್ಧಿ ಯೋಜನೆಯ ‘ವರಮಹಾಲಕ್ಷ್ಮೀ’ ಸ್ವಸಹಾಯ ಸಂಘದ ಸದಸ್ಯರಾದ ರೇಣುಕಾ ಅವರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ, ಬ್ಯಾಂಕ್​ನಿಂದ ಸಾಲ ಸಹ ಲಭ್ಯವಾಯಿತು. ಬೇಡಿಕೆ ಹೆಚ್ಚಾದಾಗ ತಮ್ಮ ಕಾಯಕಕ್ಕೆ ಹೊಸ ರೂಪ ನೀಡಿದರು. ಊರಿನ 15 ಮನೆಯವರೊಂದಿಗೆ ರ್ಚಚಿಸಿ ಚೀಲ ಹೊಲಿದುಕೊಟ್ಟರೆ ಗಾತ್ರಕ್ಕನುಗುಣವಾಗಿ ಡಜನ್​ಗೆ 8.50ರಿಂದ 10.50 ರೂ.ವರೆಗೆ ನೀಡುವ ಭರವಸೆ ನೀಡಿದರು. ಹೀಗಾಗಿ, ಇಲ್ಲೀಗ ಪ್ರತಿನಿತ್ಯ ನೂರಾರು ಚೀಲಗಳು ತಯಾರಾಗುತ್ತವೆ. ಡಜನ್(12 ಚೀಲಗಳಿಗೆ) ರೂ. 75ರಂತೆ ಕಾರವಾರ, ಕುಮಟಾ, ಶಿರಸಿಗೆ ಕಳುಹಿಸಿಕೊಡುತ್ತಾರೆ. ಅಂಗಡಿಯಲ್ಲಿ 10-15 ರೂಪಾಯಿಯಂತೆ ಮಾರಾಟವಾಗುತ್ತದೆ. ತಾನು ದುಡಿಯುವುದರೊಂದಿಗೆ ಇತರ 15 ಮಂದಿಗೂ ಉದ್ಯೋಗ, ಕಿರು ಆದಾಯ ನೀಡಿದ ಹೆಗ್ಗಳಿಕೆ ಇವರದ್ದು. ಮನೆಯಲ್ಲಿದ್ದುಕೊಂಡೇ ಆದಾಯ ಗಳಿಸುತ್ತಿರುವುದು ಒಂದೆಡೆಯಾದರೆ, ಸಾಧ್ಯವಾದಷ್ಟು ಪ್ಲಾಸ್ಟಿಕ್​ವುುಕ್ತ ಪರಿಸರ ನಿರ್ವಿುಸಬೇಕೆಂಬ ಇವರ ಕಳಕಳಿ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ.