ರಾಮಮಂದಿರ ನಿರ್ಮಾಣಕ್ಕೆ ಬೃಹತ್ ಜನಾಗ್ರಹ

ಬೆಳಗಾವಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದುಗಳು ಕಳೆದ ನಾಲ್ಕು ಶತಮಾನಗಳಿಂದ ಹೋರಾಟ ನಡೆಸುತ್ತಿದ್ದು, ಈ ಸಂಬಂಧ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಶಾಸನ ರೂಪಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ಜನಾಗ್ರಹ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಮಂಗಳವಾರ ಸಂಜೆ ನಗರದ ಸಂಭಾಜಿ ಉದ್ಯಾನದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ಆಶ್ರಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಆಯೋಜಿಸಿದ್ದ ಜನಾಗ್ರಹ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಂಡು, ಸಾಧು- ಸಂತರ ಸಮ್ಮುಖದಲ್ಲಿ ಸಂಸದ ಸುರೇಶ ಅಂಗಡಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅಮರಾವತಿ ಜಿತೇಂದ್ರನಾಥ ಗುರುಮನೋಹರ ಮಹಾರಾಜರು, ರಾಮಮಂದಿರ ನಿರ್ಮಾಣಕ್ಕಾಗಿ ಈ ವರೆಗೆ 4 ಲಕ್ಷ ಭಕ್ತರು ಜೀವ ತೆತ್ತಿದ್ದಾರೆ. ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ, ಸಲಿಂಗ ಕಾಮ ಕಲಮು ಸೇರಿ ಅನೇಕ ವಿಷಯಗಳ ಕುರಿತು ಆದ್ಯತೆ ನೀಡುವ ನ್ಯಾಯಾಲಯ, ರಾಮಮಂದಿರ ನಿರ್ಮಾಣ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. 100 ಕೋಟಿ ಜನರ ಸಮಾಜಕ್ಕಾಗಿ ನ್ಯಾಯಾಲಯಗಳಿವೆಯೆ ಅಥವಾ ನ್ಯಾಯಾಲಯಕ್ಕಾಗಿ 100 ಕೋಟಿ ಜನರ ಸಮಾಜವಿದೆಯೆ ಎಂದು ಪ್ರಶ್ನಿಸಿದರು.

ಇತರ ಸಮುದಾಯದ ದೇವರಿಗೆ 400-500 ವರ್ಷಗಳ ಇತಿಹಾಸವಿದ್ದರೆ, ರಾಮಜನ್ಮ ಭೂಮಿ ಇರುವ ಅಯೋಧ್ಯೆಗೆ 5200 ವರ್ಷಗಳ ಇತಿಹಾಸವಿದೆ. ಕೇಂದ್ರ ಸರ್ಕಾರದ ಪುರಾತತ್ತ್ವ ಇಲಾಖೆ ನಡೆಸಿರುವ ಉತ್ಖನಗಳಲ್ಲಿ ಇದು ಸಾಬೀತಾಗಿದೆ. ಇನ್ನೂ ವಿಳಂಬವಾದರೆ ಹಿಂದು ಸಮುದಾಯದ ಸಹಿಸುವುದಿಲ್ಲ. ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕು. ಇಲ್ಲವೆ ಮುಂದಿನ ಅಧಿವೇಶನದಲ್ಲಿ ವಿಶೇಷ ಶಾಸನ ರೂಪಿಸಿ, ರಾಮಮಂದಿರ ನಿರ್ಮಾಣಕ್ಕಿರುವ ಅಡ್ಡಿ, ಆತಂಕಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.

ರಾಮಮಂದಿರ ಈಗ ಟೆಂಟ್‌ನಲ್ಲಿದೆ. ಅಲ್ಲಿ ರಾಮ ಮಂದಿರ ನಿರ್ಮಾಣ ಆಗುವ ತನಕ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಜಿತೇಂದ್ರನಾಥ ಗುರುಮನೋಹರ ಮಹಾರಾಜರು ಹೇಳಿದರು.

ವಿಶ್ವ ಹಿಂದು ಪರಿಷತ್ತಿನ ಕ್ಷೇತ್ರೀಯ ಸಂಘಟನೆ ಕಾರ್ಯದರ್ಶಿ ಕೇಶವ ಹೆಗಡೆ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡದಿರುವುದರಿಂದ 10 ವರ್ಷ ಆಡಳಿತ ನಡೆಸಿದ ಸರ್ಕಾರವನ್ನು 2014ರಲ್ಲಿ ದೇಶದ ಹಿಂದು ನಾಗರಿಕರು ಕಿತ್ತು ಹಾಕಿದ್ದಾರೆ. ರಾಮಮಂದಿರ ನಿರ್ಮಾಣಕ್ಕಾಗಿ ಅನೇಕ ಹಿಂದುಗಳು ಬಲಿಯಾಗಿದ್ದಾರೆ. ಹಾಗಾಗಿ ಆದಷ್ಟು ಶೀಘ್ರ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಹಕೋಶಾಧ್ಯಕ್ಷ ಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ತಾರೀಹಾಳದ ಅಡವಿಸಿದ್ದೇಶ್ವರ ಸ್ವಾಮೀಜಿ, ಬೈಲಹೊಂಗಲದ ಪ್ರಭುನೀಲಕಂಠ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಗುರಲಿಂಗ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗದ ಜಗದಾತ್ಮಾನಂದ ಸ್ವಾಮೀಜಿ, ವಿಎಚ್‌ಪಿ ಮುಖಂಡರಾದ ಶ್ರೀಕಾಂತ ಕದಂ, ಡಾ.ಬಿ.ಜಿ.ಶಿಂಧೆ, ಡಾ.ಆರ್.ಕೆ.ಬಾಗಿ, ಸ್ವರೂಪ ಕಾಲಕುಂದ್ರಿಕರ, ವಿಜಯ ಜಾಧವ, ಬಾಳಣ್ಣ ಕಗ್ಗಣಗಿ ಮತ್ತಿತರರು ಇದ್ದರು.