ಕಚೇರಿ ಮುಂದೆ ನಿಂತಿದ್ದ ತಹಸೀಲ್ದಾರ್ ಸರ್ಕಾರಿ ವಾಹನ ಕದ್ದೊಯ್ದ ಕಳ್ಳರು

ಬೆಳಗಾವಿ: ಕಚೇರಿ ಮುಂದೆ ನಿಲ್ಲಿಸಿದ್ದ ತಹಸೀಲ್ದಾರ್ ಅವರ ಸರ್ಕಾರಿ ವಾಹನವನ್ನೇ ಕಳ್ಳತನ ಮಾಡಿರುವ ಘಟನೆ ಕುಂದಾನಗರಿಯ ಸವದತ್ತಿಯಲ್ಲಿ ಗುರುವಾರ ನಡೆದಿದೆ.

ತಹಸೀಲ್ದಾರ್ ಬನಗೌಡ ಕೋಟೂರ್ ಉಪಯೋಗಿಸುತ್ತಿದ್ದ ಸರ್ಕಾರಿ ಕಾರಿನ ಜತೆಗೆ ಒಂದು ಬೈಕ್​ ಅನ್ನು ಚಾಲಾಕಿ ಕಳ್ಳರು ಕದ್ದೊಯ್ದಿದ್ದಾರೆ. ಇಂದು ಬೆಳಗ್ಗೆ ತಹಸೀಲ್ದಾರ್​ ಕಚೇರಿಗೆ ಬಂದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ವಾಹನ ಪತ್ತೆಗಾಗಿ ಸವದತ್ತಿ ಹೊರವಲಯದಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)