ಶಿಗ್ಗಾಂವಿ: ಚಿಕ್ಕಮಲ್ಲೂರ ಗ್ರಾಮದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೋವಿನ ಸಂಗತಿ. ಪ್ರಕರಣದ ಕುರಿತು ಪೊಲೀಸರು ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.

ತಾಲೂಕಿನ ಚಿಕ್ಕಮಲ್ಲೂರ ಗ್ರಾಮದಲ್ಲಿ ಮೃತ ವಿದ್ಯಾರ್ಥಿನಿ ಮನೆಗೆ ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅವರು ಮಾತನಾಡಿದರು.
ಓದುತ್ತಿದ್ದ ವಿದ್ಯಾರ್ಥಿನಿಗೆ ಪೋನ್ ಕರೆ ಮಾಡಿ ಶಿಗ್ಗಾಂವಿಯ ಫರ್ನಿಚರ್ ಅಂಗಡಿ ಮಾಲೀಕ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ದೂರು ಕೇಳಿಬಂದಿದೆ. ಈ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಬೇಕು. ಸತ್ಯಾಸತ್ಯತೆ ಹೊರತಂದು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿಸಬೇಕು. ವಿದ್ಯಾರ್ಥಿನಿ ಸಾವಿಗೆ ಕಾರಣರಾದವರು ಯಾವುದೇ ಜಾತಿಗೆ ಸೇರಿದ ವ್ಯಕ್ತಿಯಾಗಿರಲಿ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಚುರುಕುಗೊಳಿಸಲು ಈಗಾಗಲೇ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ ಎಂದರು.
ಶಾಸಕ ಯಾಸೀರಖಾನ್ ಪಠಾಣ, ಎಸ್.ಎಫ್. ಮಣಕಟ್ಟಿ, ಸುರೇಶ ಹರಿಜನ, ಶಂಕರಗೌಡ ಪಾಟೀಲ, ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.