ಸಂಪುಟ ಸಂದೇಹ!

ಬೆಂಗಳೂರು: ಬೆಳಗಾವಿ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಆಗಲಿದೆ ಎಂಬ ಕಾಂಗ್ರೆಸ್ ನಾಯಕರ ಪುನರುಚ್ಚಾರ ಬಹುತೇಕ ಸಚಿವಾಕಾಂಕ್ಷಿಗಳ ಓಲೈಕೆಗಷ್ಟೇ ಸೀಮಿತವಾಗುವ ಸಾಧ್ಯತೆ ದಟ್ಟವಾಗಿದೆ. ಡಿ.10ರೊಳಗೆ ಸಂಪುಟ ವಿಸ್ತರಣೆ ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಘೋಷಿಸಿದ್ದರೆ, ಡಿ.5ರ ಸಮನ್ವಯ ಸಮಿತಿ ಸಭೆಯಲ್ಲೇ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕದ ನಿರ್ಧಾರವನ್ನೂ ಕೈಗೊಳ್ಳಲಾಗುವುದೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮತ್ತೊಂದೆಡೆ ಸಮನ್ವಯ ಸಮಿತಿ ಸಭೆ ಬಳಿಕ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿ ಆ ಪಕ್ಷದ ಅತೃಪ್ತರನ್ನು ಓಲೈಸಲು ತೀರ್ವನಿಸಿರುವ ಸಿಎಂ ಕುಮಾರಸ್ವಾಮಿ ನಡೆ ‘ಸಂಪುಟ’ ಗ್ರಹಣದ ಮುನ್ಸೂಚನೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಸಂಪುಟ ವಿಸ್ತರಣೆಗೆ ಜೆಡಿಎಸ್ ಕಡೆಯಿಂದ ಯಾವುದೇ ಅಡೆತಡೆ ಇಲ್ಲ. ಇರುವ ಎರಡು ಸ್ಥಾನವನ್ನು ಯಾರಿಗೆ ಕೊಡಬೇಕೆಂಬುದನ್ನು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ನಿರ್ಧರಿಸಿದ್ದು, ಒಂದು ಮುಸ್ಲಿಂ, ಒಂದು ಪರಿಶಿಷ್ಟ ಜಾತಿಗೆ ನೀಡುವ ಉದ್ದೇಶ ಹೊಂದಿದ್ದಾರೆನ್ನಲಾಗಿದೆ. ಆದರೂ ಆಕಾಂಕ್ಷಿಗಳ ಲಾಬಿ ಮಾತ್ರ ನಿಂತಿಲ್ಲ. ಆದರೆ, ಕಾಂಗ್ರೆಸ್​ನಲ್ಲಿ ಪರಿಸ್ಥಿತಿ ಅಷ್ಟು ಸುಲಭವಿಲ್ಲ. ಇರುವ ಆರು ಸ್ಥಾನಕ್ಕೆ 22 ಮಂದಿ ಪ್ರಬಲ ಆಕಾಂಕ್ಷಿಗಳಿದ್ದು, ಇದರಲ್ಲಿ ಹಿರಿಯರೇ ಎಂಟು ಮಂದಿ ಇದ್ದಾರೆ. ಈ ವಿಚಾರವಾಗಿಯೇ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಕಳೆದೊಂದು ವಾರದಲ್ಲಿ ಎರಡು ಬಾರಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆ ಮಾಡಿದಲ್ಲಿ ಉದ್ಭವಿಸಬಹುದಾದ ಸನ್ನಿವೇಶದ ಬಗ್ಗೆ ರ್ಚಚಿಸಿ, ಅಧಿವೇಶನದ ಬಳಿಕ ನೋಡೋಣ ಎಂಬ ತೀರ್ವನಕ್ಕೆ ಬಂದಿದ್ದಾರೆಂದು ಹೇಳಲಾಗುತ್ತಿದೆ.

ಆಕಾಂಕ್ಷಿಗಳ ನಿರೀಕ್ಷೆ

  • 5ರಂದು ಸಮನ್ವಯ ಸಮಿತಿ ಸಭೆಯಲ್ಲಿ ಸಂಪುಟ ವಿಸ್ತರಣೆ ತೀರ್ಮಾನ
  • 6 ಅಥವಾ 7ರಂದು ದೆಹಲಿಗೆ ಕೈ ನಾಯಕರ ಪ್ರಯಾಣ, ರಾಹುಲ್ ಸಭೆ
  •  8 ಅಥವಾ 9ರಂದು ಸಂಪುಟ ವಿಸ್ತರಣೆ
  • 10ರಂದು ಅಧಿವೇಶನದ ಸಂದರ್ಭ ಖಾತೆ ಹಂಚಿಕೆ

ಪರಮೇಶ್ವರ ವಿರುದ್ಧ ಅಸಮಾಧಾನ

ಡಿಸಿಎಂ ಡಾ. ಜಿ. ಪರಮೇಶ್ವರ್ ಪಕ್ಷದ ಶಾಸಕರ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ, ಸಂಪುಟ ಸಭೆಯಲ್ಲಿಯೂ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲವೆಂಬ ಆರೋಪಗಳು ಇವೆ. ಆದ್ದರಿಂದಲೇ ಸಿಎಂ ಅವರನ್ನು ಸಿಎಲ್​ಪಿಗೆ ಆಹ್ವಾನಿಸಲಾಗಿದೆ.

ಡಿ.8ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಸಿಎಂ ಅವರನ್ನೂ ಆಹ್ವಾನಿಸುವಂತೆ ಹೇಳಿದ್ದೇನೆ. ಶಾಸಕರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು?

| ಸಿದ್ದರಾಮಯ್ಯ ಮಾಜಿ ಸಿಎಂ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಭಾಗಿಯಾಗುವ ಸಾಧ್ಯತೆ ಇದೆ. ಶಾಸಕರ ಅಭಿಪ್ರಾಯಗಳನ್ನೂ ಅವರು ಆಲಿಸಲಿದ್ದಾರೆ.

| ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಸಿಎಲ್ಪಿಯಲ್ಲಿ ಎಚ್ಡಿಕೆ ಭಾಷಣ

ಬೆಂಗಳೂರು: ಮೈತ್ರಿ ಸರ್ಕಾರದ ಬಗ್ಗೆ ಸಿಡಿದೆದ್ದಿರುವ ಕಾಂಗ್ರೆಸ್ ಶಾಸಕರನ್ನು ಸಮಾಧಾನಪಡಿಸಲು ಸಿಎಂ ಅವರೇ ಮುಂದಡಿ ಇಟ್ಟಿದ್ದಾರೆ. ಡಿ.10ರಂದು ಆರಂಭವಾಗುವ ಬೆಳಗಾವಿ ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಡಿ.8ರಂದು ಬೆಂಗಳೂರಲ್ಲಿ ಕರೆಯಲಾಗಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗುತ್ತಿದೆ, ಅನುದಾನ ನೀಡುತ್ತಿಲ್ಲ, ಸರ್ಕಾರ ಟೇಕಾಫ್ ಆಗಿಲ್ಲ, ನಮ್ಮ ಕ್ಷೇತ್ರಗಳ ಕೆಲಸ ಆಗುತ್ತಿಲ್ಲ, ಸಿಎಂ ಸ್ಪಂದಿಸುತ್ತಿಲ್ಲ ಎಂಬ ಸಿಟ್ಟು ಸೆಡವು ಕೈ ಪಾಳಯದಲ್ಲಿ ಹೊಗೆಯಾಡುತ್ತಿದೆ. ಸರ್ಕಾರದ ಹೊರತಾಗಿ ವಿವಿಧ ಜಿಲ್ಲೆಗಳಲ್ಲೂ ಪಕ್ಷದ ಬೆಳವಣಿಗೆಗೆ ಜೆಡಿಎಸ್ ಶಾಸಕರು ಅಡ್ಡಿಪಡಿಸುತ್ತಿದ್ದಾರೆ ಎಂಬ ಸ್ಥಳೀಯ ಕಾಂಗ್ರೆಸ್ ನಾಯಕರ ದನಿಯೂ ಬಲವಾಗುತ್ತಿದೆ. ಮೈತ್ರಿ ಬಗ್ಗೆಯೆ ಒಡಕು ದನಿ ಮೂಡಿದೆ. ಈ ಕಾರಣದಿಂದ ಒಟ್ಟಾರೆಯಾಗಿ ಕಾಂಗ್ರೆಸ್ ಶಾಸಕರು, ಮುಖಂಡರ ಮನವೊಲಿಸುವ ಉದ್ದೇಶದಿಂದ ಈ ಪ್ರಯೋಗ ನಡೆಯಲಿದೆ. ಕುಮಾರಸ್ವಾಮಿ ಕಾಂಗ್ರೆಸ್ ಸಭೆಯಲ್ಲಿ ಮನವರಿಕೆ ಮಾಡಿಕೊಡುವ ಯೋಜನೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒಟ್ಟಾಗಿ ಸೇರಿ ರೂಪಿಸಿದ್ದಾರೆಂಬುದು ವಿಶೇಷ.