ಸಿನಿಮಾ

ಜನರು ಸಂಕಷ್ಟದಲ್ಲಿದ್ದಾಗ ಇವರೆಲ್ಲ ಎಲ್ಲಿದ್ದರು?


ಬೆಳಗಾವಿ : ಈಗ ಬಂದು ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು, ಜನರು ಪ್ರವಾಹ, ಕೊರೋನಾದಂತಹ ಸಂಕಷ್ಟದಲ್ಲಿದ್ದಾಗ ಎಲ್ಲಿದ್ದರು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದ್ದಾರೆ.
ಕ್ಷೇತ್ರದ ಬಾಳೆಕುಂದ್ರಿ ಕೆಎಚ್ ಗ್ರಾಮದಲ್ಲಿ ಶುಕ್ರವಾರ ರೋಡ್ ಶೋ ನಡೆಸಿ, ಬೃಹತ್ ಜನಸ್ತೋಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿಯ ನಾಗೇಶ ಮನ್ನೋಳಕರ್ ಮತ್ತು ಪಕ್ಷೇತರ ಅಭ್ಯರ್ಥಿ ಆರ್.ಎಂ.ಚೌಗಲೆ 4 ತಿಂಗಳಿನಿಂದ ಕ್ಷೇತ್ರದ ಜನರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. 4 ತಿಂಗಳಲ್ಲಿ 4 ಹಬ್ಬಗಳಿಗೆ ಶುಭಾಷಯ ಕೋರಿದ್ದು ಬಿಟ್ಟರೆ ಏನನ್ನೂ ಮಾಡಲಿಲ್ಲ. ರಾಜಹಂಸಗಡದಲ್ಲಿ ನಾನು ಛತ್ರಪತಿ ಶಿವಾಜಿ ಮಹಾರಾಜ ಭವ್ಯ ಪುತ್ಥಳಿ ಸ್ಥಾಪನೆ ಮಾಡಿದರೆ ಪೋಸ್ಟರ್ ಹಚ್ಚಲು ಇವರು ಬಂದಿದ್ದರು. ಇವರೆಲ್ಲ ಪೋಸ್ಟರ್ ಬಾಯ್ಸ್ ಅಷ್ಟೇ ಎಂದು ವ್ಯಂಗ್ಯವಾಡಿದರು.
ಕೊರೋನಾ ಮತ್ತು ಪ್ರವಾಹ ಬಂದಾಗ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಇವರ್ಯಾರೂ ಕಾಣಿಸಲಿಲ್ಲ. ಜನರ ನೆರವಿಗೆ ಬರಲಿಲ್ಲ. ಆಗ ನಾನು ಮುಂದೆ ನಿಂತು ನನ್ನಿಂದಾದಷ್ಟು ಸಹಾಯ ಮಾಡಿದ್ದೇನೆ. ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದೇನೆ. ಆಹಾರದ ಕಿಟ್, ಔಷಧ ಕಿಟ್, ತರಕಾರಿ, ಕಿರಾಣಿ ಸಾಮಗ್ರಿ ವಿತರಿಸಿದ್ದೇನೆ. ಮನೆ ಮಗಳಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಆಗ ಜನರು ಹೇಗಿದ್ದಾರೆ ನೋಡಲು ಬಾರದವರು ಈಗ ದೊಡ್ಡ ದೊಡಡ್ ಮಾತುಗಳನ್ನು ಆಡಿ ಜನರ ದಿಕ್ಕು ತಪ್ಪಿಸುಲ ಯತ್ನಿಸುತ್ತಿದ್ದಾರೆ. ಇವರ ಮಾತನ್ನು ನಂಬುವಷ್ಟು ದಡ್ಡರಲ್ಲ ನನ್ನ ಕ್ಷೇತ್ರದ ಜನರು. ಚುನಾವಣೆ ಮುಂಗಿದ ಬಳಿಕ ಮತ್ತೆ ಇವರೆಲ್ಲ ನಾಪತ್ತೆಯಾಗುತ್ತಾರೆ. ಇವರ ಮೊಬೈಲ್ ಸಹ ಸ್ವಿಚ್ಡ್ ಆಫ್ ಆಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಜನರಿಗೆ ಎಚ್ಚರಿಸಿದರು. 
ನಾನು ಅಭಿವೃದ್ಧಿ ಕೆಲಸ ಮಾಡಿ ನಿಮ್ಮ ಮುಂದೆ ನಿಂತಿದ್ದೇನೆ. ಕೊಟ್ಟ ವಚನದಂತೆ ನಡೆದುಕೊಂಡು ಬಂದಿದ್ದೇನೆ. ಕಳೆದ 5 ವರ್ಷ ನಿಮ್ಮ ಕಷ್ಟ, ಸುಖದಲ್ಲಿ ಜೊತೆಯಾಗಿದ್ದೇನೆ. ವಿರೋಧ ಪಕ್ಷದ ಶಾಸಕಿಯಾಗಿ ನನ್ನ ಕ್ಷೇತ್ರದ ಜನರ ಬವಣೆ ನೀಗಿಸಲು ಎಷ್ಟು ಕಷ್ಟಪಟ್ಟಿರಬೇಕು ಎಂಬುದನ್ನು ಊಹಿಸಿ. ಇಷ್ಟೊಂದು ಕೆಲಸ ಮಾಡಿದ್ದರಿಂದಲೇ ಇಂದು ನೀವೆಲ್ಲ ನನ್ನನ್ನು ಮಗಳು, ತಾಯಿ, ಅಕ್ಕ, ತಂಗಿ ಎಂದು ಪ್ರೀತಿಸುತ್ತಿದ್ದೀರಿ. ಇಲ್ಲದ ಮಾತುಗಳನ್ನಾಡಿ ದಾರಿ ತಪ್ಪಿಸಲು ಬರುವವರನ್ನು ನಂಬಬೇಡಿ. ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡಿ, ಮೇ 10ರಂದು ತಪ್ಪದೆ ದಯವಿಟ್ಟು  ಇವಿಎಂ ಯಂತ್ರದಲ್ಲಿ ನನ್ನ ಕ್ರಮ ಸಂಖ್ಯೆ 4, ಹಸ್ತದ ಗುರುತಿಗೆ ತಾವೆಲ್ಲರೂ ‌ಮತಗಳನ್ನು ನೀಡುವ ಮೂಲಕ ಹರಸಿ, ಆಶೀರ್ವದಿಸಿ ಎಂದು ಹೆಬ್ಬಾಳಕರ್ ವಿನಂತಿಸಿದರು.
ಕ್ಷೇತ್ರದ ಪೂರ್ವಭಾಗ, ಪಶ್ಚಿಮ ಭಾಗ ಎಲ್ಲೇ ಹೋದರೂ ಅಪಾರ ಸಂಖ್ಯೆಯಲ್ಲಿ ಜನರು ನನ್ನನ್ನು ಬೆಂಬಲಿಸುತ್ತಿದ್ದಾರೆ. ಅಕ್ಕಾ ನಿಮ್ಮಿಂದ ಪ್ರತೀ ಊರಿಗೆ, ಪ್ರತಿ ಕುಂಟುಬಕ್ಕೆ ಸಹಾಯವಾಗಿದೆ ಎನ್ನುತ್ತಾರೆ. ಕಳೆದ ಬಾರಿ ಹೊಸದಾಗಿ ಜನರ ಮುಂದೆ ನಿಂತು ಮತ ಕೇಳಿದ್ದೆ. ಆಗ ದೊಡ್ಡ ಪ್ರಮಾಣದಲ್ಲಿ ನೀವೆಲ್ಲ ಮತ ನೀಡಿ ಗೆಲ್ಲಿಸಿ ಕಳಿಸಿದ್ದೀರಿ. ಈಗ ಅಭಿವೃದ್ಧಿ ಮಾಡಿ ಮತ್ತೆ ಬಂದಿದ್ದೇನೆ. ನಾನು ಮಾಡಿದ ಕೆಲಸಗಳು ನಿಮ್ಮ ಮುಂದಿವೆ. ನಿಮ್ಮಿಂದ ಮತ ಕೇಳಲು ನನಗೆ ಹಕ್ಕಿದೆ ಎಂದುಕೊಳ್ಳುತ್ತೇನೆ. ಜೊತೆಯಾಗಿ ಮುಂದೆ ನಡೆಯೋಣ, ಇನ್ನಷ್ಟು ಯೋಜನೆಗಳನ್ನು ತರುವ ಮೂಲಕ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸೋಣ. ಯುವಕರ ಕೈಗೆ ಒಳ್ಳೆಯ ಉದ್ದೋಗ ಒದಗಿಸೋಣ. ನಿಮ್ಮೆಲ್ಲರ ಸಹಕಾರವಿರಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿ ರೋಡ್ ಶೋ ಯಶಸ್ವಿಗೊಳಿಸಿದರು. ಸ್ಥಳೀಯ ಮುಖಂಡರು, ಮಹಿಳೆಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. 

Latest Posts

ಲೈಫ್‌ಸ್ಟೈಲ್