ಪಿಎಲ್​ಡಿ ಬ್ಯಾಂಕ್​ ಚುನಾವಣೆಗೆ ಮೊದಲು, ನಂತರ ನಡೆದಿದ್ದಿಷ್ಟು

ಬೆಳಗಾವಿ: ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿ ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್​ಡಿ) ಬ್ಯಾಂಕ್​ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಬಣದವರೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆ ಫಲಿತಾಂಶ ಹೊರಬೀಳುವುದಕ್ಕೂ ಮೊದಲು ಮತ್ತು ನಂತರ ಬೆಳಗಾವಿಯಲ್ಲಿ ಹಲವು ಮಹತ್ತರ ಬೆಳವಣಿಗೆಗಳು ನಡೆದವು. ಇಂದು ಬೆಳಗಾವಿಯಲ್ಲಿ ನಡೆದ ಇಡೀ ಘಟನೆಯ ವಿವರ ಇಲ್ಲಿದೆ.

ಬೆಳಗಾವಿಯಲ್ಲಿ ಬ್ಯಾಂಕ್​ ಚುನಾವಣೆ ನಡೆಯುವುದಕ್ಕೂ ಮೊದಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಬೆಳಗಾವಿಗೆ ಕಾಲಿಟ್ಟಿದ್ದರು. ಎರಡೂ ಬಣಗಳ ನಡುವೆ ಸಂಧಾನ ನಡೆಯಲಿದೆ ಎಂಬ ಮುನ್ಸೂಚನೆ ಅದಾಗಲೇ ಸಿಕ್ಕಿತ್ತು. ಅವರ ಭೇಟಿ, ಸಂಧಾನದ ಕಾರ್ಯ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ.

ಬ್ಯಾಂಕ್​ ಚುನಾವಣೆಗೆ ಬೆಳಗ್ಗೆ 10 ರಿಂದ 11 ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ವರಿಷ್ಠರ ಸಂಧಾನ ಸೂತ್ರ ಮತ್ತು ಸಂದೇಶದೊಂದಿಗೆ ಆಗಮಿಸಿದ್ದ ಈಶ್ವರ ಖಂಡ್ರೆ ಎರಡೂ ಬಣವನ್ನು ಒಟ್ಟಿಗೆ ಕೂರಿಸಿ ಚರ್ಚೆ ನಡೆಸಿದ್ದರು.

ಇದಾದ ನಂತರ ಬೆಳಗ್ಗೆ 10.50 ನಿಮಿಷಕ್ಕೆ ಸರಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್​ ಬಣ ನಾಮಪತ್ರ ಸಲ್ಲಿಸಿತು. ನಾಮಪತ್ರ ಸಲ್ಲಿಕೆಯ ಅವಧಿ ಮುಗಿಯುತ್ತಿದ್ದರೂ, ಜಾರಕಿಹೊಳಿ ಬಣದ ಯಾರೊಬ್ಬರೂ ನಾಮಪತ್ರ ಸಲ್ಲಿಸಲಿಲ್ಲ. ಆಗ ಲಕ್ಷ್ಮೀ ಹೆಬ್ಬಾಳ್ಕರ್​ ಬಣದವರೇ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು. ಆದರೆ, ಚುನಾವಣಾಧಿಕಾರಿಯ ಘೋಷಣೆ ಮಾತ್ರ ಬಾಕಿ ಉಳಿದಿತ್ತು. ಕೆಲ ಹೊತ್ತಿನಲ್ಲೇ ಅಧಿಕೃತ ಘೋಷಣೆಯೂ ಆಗಿ, ಲಕ್ಷ್ಮೀ ಹೆಬ್ಬಾಳ್ಕರ್ ಬಣದ ಮಹಾದೇವ ಪಾಟೀಲ್​ ಅಧ್ಯಕ್ಷರಾಗಿ ಮತ್ತು ಜಮಾದಾರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್​ ಅವರು, ಅಧಿಕೃತ ಘೋಷಣೆಗೂ ಮೊದಲೇ ತಮ್ಮ ಬಣದವರು ಅವಿರೋಧವಾಗಿ ಆಯ್ಕೆಯಾಗುವ ಮಾಹಿತಿ ಬಿಟ್ಟುಕೊಟ್ಟಿದ್ದರು. ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ‘ವಿಜಯವಾಣಿ’ ಸೋದರ ಸಂಸ್ಥೆ ‘ದಿಗ್ವಿಜಯ ನ್ಯೂಸ್’​ನೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್​, ವರಿಷ್ಠರು ತೀರ್ಮಾನ ಮಾಡಿದ್ದಾರೆ. ಈ ಚುಣಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯುತ್ತದೆ,” ಎಂದಿದ್ದರು. ಅವರ ಮಾತಿನಂತೇ ಅವರ ಬಣದವರೇ ಅವಿರೋಧ ಆಯ್ಕೆಯಾದರು.

ಇದಾದ ಕೆಲ ಹೊತ್ತಿನಲ್ಲೇ ಜಾರಕಿಹೊಳಿ ಸೋದರರು, ಲಕ್ಷ್ಮೀ ಹೆಬ್ಬಾಳ್ಕರ್​ ಅವರೊಂದಿಗೆ ಬೆಳಗಾವಿಯ ಸರ್ಕೀಟ್​ ಹೌಸ್​ಗೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಅವರು, “ಸ್ಥಳೀಯ ಮಟ್ಟದಲ್ಲಿ ಯಾವುದೇ ಭಿನ್ನಮತ ಇಲ್ಲ. ಉಭಯ ನಾಯಕರಲ್ಲಿ ಸಂವಹನ ಕೊರತೆಯಿಂದಾಗಿ ಗೊಂದಲ ಸೃಷ್ಟಿಯಾಗಿತ್ತು. ಪಕ್ಷದ ಹಿತದೃಷ್ಟಿಯಿಂದ ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ. ವರಿಷ್ಠರ ಸೂಚನೆಯಂತೆ ಎಲ್ಲವೂ ಇತ್ಯರ್ಥವಾಗಿದೆ. ಇದರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಇಲ್ಲ. ಬೆಳಗಾವಿ ಜಿಲ್ಲಾ ಕಾಂಗ್ರೆಸ್​ನಲ್ಲಿ ಭಿನ್ನಮತವೂ ಇಲ್ಲ. ಸರ್ಕಾರಕ್ಕೆ ಯಾವ ಸಮಸ್ಯೆಯೂ ಇಲ್ಲ,” ಎಂದು ಸ್ಪಷ್ಟಪಡಿಸಿದರು.

ಕೊನೆಯದಾಗಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​, ಬೆಳಗಾವಿಯ ಸಮಸ್ಯೆ ಸುಖಾಂತ್ಯವಾಗಿದೆ. ವೈಯಕ್ತಿಕ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಎಲ್ಲವನ್ನೂ ಭಗವಂತನೇ ನೋಡಿಕೊಳ್ಳುತ್ತಾನೆ ಎಂದಷ್ಟೇ ಹೇಳಿದರು.