ಚುನಾವಣೆ ಬಂದಾಗ ಟೋಪಿ, ಖಡ್ಗ ಹಿಡಿದು ಪೋಸ್‌ ಕೊಡುತ್ತಾರೆ: ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಭಾರಿ ವಿವಾದಕ್ಕೆ ಕಾರಣವಾಗಿರುವ ಟಿಪ್ಪು ಜಯಂತಿ ಆಚರಣೆ ಪರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಬ್ಯಾಟಿಂಗ್‌ ಬೀಸಿದ್ದು, ಮಹಾನ್‌ ವ್ಯಕ್ತಿಗಳ ಜಯಂತಿಯನ್ನು ಸರ್ಕಾರ ಮಾಡುತ್ತಿದೆ. ಎಲ್ಲ ಮಹಾನ್ ಪುರುಷರನ್ನು ಒಂದು ಸಮಾಜಕ್ಕೆ ಸೀಮಿತ ಮಾಡುವುದು ಬೇಡ ಎಂದು ಹೇಳಿದ್ದಾರೆ.

ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ಸಮಾಜದವರು ಮಹಾನ್‌ ವ್ಯಕ್ತಿಗಳ ಗುಣಗಳನ್ನು ಪಡೆದುಕೊಳ್ಳಲಿ. ಟಿಪ್ಪು ಸುಲ್ತಾನ್ ರೈತರ ಪರವಾದ ಕಾಳಜಿಯನ್ನು ಹೊಂದಿದ್ದರು. ಹಿಂದು ಸಂಸ್ಕೃತಿಯ ಶೃಂಗೇರಿ ಮಠವನ್ನು ಆಕ್ರಮಿಸಿದಾಗ ಟಿಪ್ಪು ಸುಲ್ತಾನ್ ತಮ್ಮ ಸೈನಿಕರನ್ನು ಕಳುಹಿಸಿ ಮಠವನ್ನು ಉಳಿಸಿಕೊಟ್ಟಿದ್ದರು. ಇಂದಿಗೂ ಟಿಪ್ಪು ಹೆಸರಿನಲ್ಲಿ ಅಲ್ಲಿ ನಿತ್ಯವೂ ಪ್ರಾರ್ಥನೆ ಆಗುತ್ತದೆ ಎಂದರು.

ಇಂತಹ ಜಯಂತಿಗಳನ್ನು ಮಾಡುವಾಗ ರಾಜಕಾರಣವನ್ನು ಯಾರು ಕೂಡ ಮಾಡಬಾರದು. ರಾಜಕೀಯ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಟೋಪಿ ಹಾಕಿಸಿಕೊಂಡು ಹಾಗೂ ಖಡ್ಗವನ್ನು ಹಿಡಿದುಕೊಂಡು ಪೋಸ್ ಕೊಡುತ್ತಾರೆ. ಆದರೆ, ಅದೇ ಜಯಂತಿಗಳು ಬಂದಾಗ ನಮ್ಮ ವಿರೋಧ ಇದೆ ಎಂದು ಹೇಳುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್‌ ನೀಡಿದರು.