ಫೆ. 8ರಿಂದ ಬೆಳಗಾವಿಯಲ್ಲಿ ಕರ್ನಾಟಕ ಕುಸ್ತಿ ಹಬ್ಬ

| ಇಮಾಮಹುಸೇನ್ ಗೂಡುನವರ ಬೆಳಗಾವಿ

ಸ್ಕೇಟಿಂಗ್, ಈಜು, ಫುಟ್​ಬಾಲ್ ಕ್ಷೇತ್ರದಲ್ಲಿ ಬೆಳಗಾವಿ ಮಿಂಚು ಹರಿಸಿದೆ. ಈಗ ರಾಜ್ಯದಲ್ಲಿ ಮೊದಲ ಬಾರಿ ಆಯೋಜಿಸಲಾಗುತ್ತಿರುವ ‘ಕರ್ನಾಟಕ ಕುಸ್ತಿ ಹಬ್ಬ’ಕ್ಕೆ ಬೆಳಗಾವಿಯಲ್ಲಿ ಸಿದ್ಧತೆಗಳು ಬಿರುಸಿನಿಂದ ಸಾಗಿವೆ. ಹಲವು ಕುಸ್ತಿ ಸಂಘಟನೆಗಳ ಸಹಯೋಗದೊಂದಿಗೆ ಯುವ ಸಬಲೀಕರಣ ಇಲಾಖೆ ಫೆ.8ರಿಂದ 10ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಿದೆ. ಕರ್ನಾಟಕದ ವಿವಿಧೆಡೆಯಿಂದ 1,050 ಪೈಲ್ವಾನರು ಭಾಗವಹಿಸಲಿದ್ದಾರೆ. ಯುವಕರನ್ನು ಕುಸ್ತಿಯತ್ತ ಆಕರ್ಷಿಸುವಂತೆ ಮಾಡುವುದು ಈ ಹಬ್ಬದ ಉದ್ದೇಶ. ವಿದೇಶ ಹಾಗೂ ಹೊರರಾಜ್ಯಗಳ 18 ಜಟ್ಟಿಗಳು ಕುಸ್ತಿ ಅಖಾಡದಲ್ಲಿ ಸೆಣಸಾಡಲಿದ್ದಾರೆ.

60 ವಿಭಾಗಗಳಲ್ಲಿ ಸ್ಪರ್ಧೆ: ಪುರುಷರು, ಮಹಿಳೆಯರು, ಬಾಲಕ- ಬಾಲಕಿಯರು ಹಾಗೂ ಯುವಕ-ಯುವತಿಯರಿಗಾಗಿ 60 ವಿಭಾಗಗಳಲ್ಲಿ ಕುಸ್ತಿ ಸ್ಪರ್ಧೆ ನಡೆಯಲಿವೆ. 14, 17 ವಯೋಮಿತಿ ಹಾಗೂ ಹಿರಿಯರ ವಿಭಾಗಗಳಲ್ಲಿ (ಪುರುಷರು-ಮಹಿಳೆಯರು ಪ್ರತ್ಯೇಕ) ಸ್ಪರ್ಧೆ ನಡೆಯಲಿದೆ. ಗೆದ್ದವರಿಗೆ ಕರ್ನಾಟಕ ಕೇಸರಿ, ಕರ್ನಾಟಕ ಕಿಶೋರ, ಕರ್ನಾಟಕ ಬಾಲಕೇಸರಿ ಇತ್ಯಾದಿ ಬಿರುದುಗಳ ಜತೆಗೆ, ನಗದು ಬಹುಮಾನ ಮತ್ತು ಬೆಳ್ಳಿ ಗದೆ ನೀಡಲಾಗುವುದು. ಅಂದಾಜು 40 ಕೆಜಿಯಿಂದ 120 ಕೆಜಿ ಮೇಲ್ಪಟ್ಟ ತೂಕದವರೆಗಿನ ಸ್ಪರ್ಧೆಗಳು ನಡೆಯಲಿವೆ. ಮಣ್ಣಿನ ಕಣದಲ್ಲಿ ನಡೆಯುವ ದೇಸಿ ಕ್ರೀಡೆಯತ್ತ ಯುವಸಮೂಹ ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ, ಈ ಕುಸ್ತಿ ಹಬ್ಬ ಆಯೋಜನೆಗೆ ಮುಂದಾಗಿದೆ. ಕೂಟಕ್ಕೆ 14 ಜಟ್ಟಿಗಳು ಹೊರರಾಜ್ಯಗಳಿಂದ ಹಾಗೂ 4 ಜಟ್ಟಿಗಳು ವಿದೇಶದಿಂದ ಬರಲಿದ್ದಾರೆ. ಈ ಪೈಕಿ ಇಬ್ಬರು ಪುರುಷ-ಇಬ್ಬರು ಮಹಿಳಾ ಜಟ್ಟಿಗಳು. ಈ ಜಟ್ಟಿಗಳು ಭಾರತದ ಕುಸ್ತಿಪಟುಗಳೊಂದಿಗೆ ಫೆ. 10ರಂದು ಸೆಣಸಾಡಲಿದ್ದಾರೆ. ಹಳ್ಳಿಭಾಗದ ಕುಸ್ತಿಪ್ರೇಮಿಗಳಿಗೆ ಅಂಕಗಳ ಆಧಾರದಲ್ಲಿ ಕುಸ್ತಿ ಮಾಹಿತಿ ತಿಳಿಯುವುದಿಲ್ಲ. ಹಾಗಾಗಿ, ಹಳ್ಳಿ ಮಾದರಿಯಲ್ಲಿ ಜಂಗೀ ನಿಖಾಲಿ ಕುಸ್ತಿಗಳನ್ನು ಆಯೋಜಿಸಲಾಗುತ್ತಿದೆ.

ಸತತ ಐದು ವರ್ಷಗಳಿಂದ ಕರ್ನಾಟಕ ಕುಸ್ತಿ ಹಬ್ಬ ಆಯೋಜನೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತ ಬಂದಿದ್ದೆವು. ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ, ಹಬ್ಬ ಆಯೋಜನೆಗೆ ನಿಶ್ಚಯಿಸಿತ್ತು. ಆದರೆ, ಕೊನೇ ಘಳಿಗೆಯಲ್ಲಿ ಮುಂದೂಡಿಕೆಯಾಗಿತ್ತು. ಈಗಿನ ಸರ್ಕಾರ ಬೆಳಗಾವಿ ಜಿಲ್ಲೆಯಲ್ಲೇ ಕುಸ್ತಿ ಹಬ್ಬ ಆಯೋಜಿಸುತ್ತಿರುವುದು ಖುಷಿ ತಂದಿದೆ.

| ರತನಕುಮಾರ ಮಠಪತಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಭಾರತ ಶೈಲಿ ಕುಸ್ತಿ ಸಂಘಟನೆ

ಪ್ರಾಯೋಜಕರ ಹುಡುಕಾಟ

ಕರ್ನಾಟಕ ಕುಸ್ತಿ ಹಬ್ಬದಲ್ಲಿ ಪ್ರತಿದಿನ 1 ಲಕ್ಷ ಕ್ರೀಡಾಸಕ್ತರು ಸೇರುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ. ಕುಸ್ತಿಪಟುಗಳಿಗೆ ಬಹುಮಾನದ ರೂಪದಲ್ಲಿ ಆಕರ್ಷಕ ವಸ್ತುಗಳನ್ನು ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಯೋಜಕರ ಹುಡುಕಾಟ ನಡೆಸಿದ್ದಾರೆ. ಕರ್ನಾಟಕ ಕುಸ್ತಿ ಹಬ್ಬಕ್ಕಾಗಿ ರಾಜ್ಯ ಸರ್ಕಾರ 2 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಈಗಾಗಲೇ 1 ಕೋಟಿ ರೂ. ಅನುದಾನ ಬಿಡುಗಡೆಯೂ ಆಗಿದೆ. ವಿವಿಧ ವಿಭಾಗಗಳಲ್ಲಿ ಗೆಲ್ಲುವ ಜಟ್ಟಿಗಳಿಗೆ ಅಂದಾಜು 80 ಲಕ್ಷ ರೂ. ಮೌಲ್ಯದ ಪ್ರಶಸ್ತಿಗಳನ್ನು ವಿತರಣೆ ಮಾಡಲು ತೀರ್ವನಿಸಿದೆ.