ಗೋಕಾಕದಲ್ಲಿ ನೀರಿನ ಕರದಾತರ ಪ್ರತಿಭಟನೆ

ಗೋಕಾಕ: ನೀರಿನ ಕರ ಹೆಚ್ಚಳ ಖಂಡಿಸಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಸೋಮವಾರ ಪೇಟೆ, ಅಂಬಿಗೇರಗಲ್ಲಿ ಮತ್ತು ಬಣಗಾರ ಗಲ್ಲಿಯ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಅಶೋಕ ಪೂಜಾರಿ, ನಗರದ ಗೃಹೋಪಯೋಗಿ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯಡಿ ನಳದ ಜೋಡಣೆಗೆ ವಿಧಿಸಿರುವ ನೀರಿನ ಕರ ದುಬಾರಿಯಾಗಿರುವುದರ ಜತೆಗೆ ಈಗ ಪ್ರತಿ ನಳದ ಜೋಡಣೆಗೆ ನಿಗದಿಪಡಿಸಿರುವ ನೀರಿನ ಉಪಯೋಗದ ಪ್ರಮಾಣವೂ ಅತ್ಯಲ್ಪವಾಗಿದೆ.ನಗರಸಭೆ ಕೂಡಲೇ ಕರ ಪರಿಷ್ಕರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿ ಮನೆಗೆ ತಿಂಗಳಿಗೆ ಕೇವಲ 8,000 ಲೀಟರ್ ಪ್ರಮಾಣ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಈಗ ನಿಗದಿಪಡಿಸಿರುವ ಕರವೂ ದುಬಾರಿಯಾಗಿದೆ. ನಗರಸಭೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಕನಿಷ್ಠ ಬಳಕೆ ಪ್ರಮಾಣವನ್ನು ತಿಂಗಳಿಗೆ ಪ್ರತಿ ಮನೆಗೆ 40,000 ಲೀಟರ್‌ಗೆ ಹೆಚ್ಚಿಸುವ ಜತೆಗೆ ವಾರ್ಷಿಕ ಕರ 1,400 ರೂಪಾಯಿಗೆ ಮೀರದಂತೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ನಗರಸಭೆ ಅಂತಿಮ ತೀರ್ಮಾನ ತೆಗೆದುಕೊಳ್ಳುವವರೆಗೆ ಸಾರ್ವಜನಿಕರು ನೀರಿನ ಕರ ತುಂಬದಿರಲು ನಿರ್ಣಯಿಸಿದ್ದಾರೆ. ಈ ಅವಧಿಯಲ್ಲಿ ಈ ಕಾರಣಕ್ಕಾಗಿ ನೀರಿನ ಸಂಪರ್ಕ ಕಡಿತಗೊಳಿಸದಂತೆ ಆಗ್ರಹಿಸಿದರು.

ಪೌರಾಯುಕ್ತ ಎಂ.ಎಚ್. ಅತ್ತಾರ, ಎರಡೂ ಬೇಡಿಕೆಗಳನ್ನು ಕೂಡಲೇ ಪರಿಶೀಲಿಸುವುದಾಗಿ ಹೇಳಿದರು. ಜತೆಗೆ ಈ ಬಗ್ಗೆ ಕೂಡಲೇ ನಗರಸಭೆಯ ಸಾಮಾನ್ಯ ಸಭೆ ಕರೆದು ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಭಗವಂತ ಹುಳ್ಳಿ, ಚಂದ್ರು ಇಳಿಗೇರ, ಗಿರೀಶ ಖೋತ, ಸಹಾಯಕ ಅಭಿಯಂತ ತಡಸಲೂರ, ಮುಖಂಡರಾದ ಪ್ರಕಾಶ ದೀಕ್ಷಿತ, ಶ್ರೀಶೈಲ ಪೂಜಾರಿ, ರಾಜು ಮಾಡಲಗಿ, ಸತ್ಯಪ್ಪ ತಟ್ಟಿಮನಿ, ಬಾಳು ಅಂಬಿ, ನಾಗು ದೇಸಾಯಿ, ಆನಂದ ಸಂಕಾಜಿ, ಮಹೇಶ ಮಠಪತಿ, ರಾಜು ನಂದಗಾಂವಿ, ಲಕ್ಷ್ಮವ್ವ ಅಂಬಿ, ಗಂಗವ್ವ ಮುತ್ನಾಳ, ಶ್ರೀಕಾಂತ ಜಾಂಗಟಿಹಾಳ, ಪ್ರದೀಪ ಪೂಜಾರಿ, ವಿಜಯ ಕೋಳಿ, ಶಂಕರ ಕಾಳಮ್ಮಗುಡಿ, ರವಿ ಮಡಿವಾಳರ ಇತರರು ಉಪಸ್ಥಿತರಿದ್ದರು.

ರಸ್ತೆ ಅಭಿವೃದ್ಧಿಗೆ ಆಗ್ರಹ

ನಗರದ ಸೋಮವಾರಪೇಟೆ, ಬಣಗಾರಗಲ್ಲಿ ಮತ್ತು ಅಂಬಿಗೇರ ಗಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನು ಕೂಡಲೇ ಕೈಗೊಳ್ಳುವಂತೆ ಅಶೋಕ ಪೂಜಾರಿ ಆಗ್ರಹಿಸಿದರು. ಆಗಸ್ಟ್ 5ರ ಒಳಗಾಗಿ ಕಾಮಗಾರಿ ಪ್ರಾರಂಭವಾಗದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

24×7 ಕುಡಿಯುವ ನೀರು ಹಾಗೂ ಯುಜಿಡಿ ಮುಖ್ಯ ಪೈಪ್‌ಲೈನ್‌ಗಳು ಸೋಮವಾರ ಪೇಟೆಯಲ್ಲಿ ಹಾದುಹೋಗಿವೆ. ಸರಿಯಾಗಿ ಟೆಸ್ಟಿಂಗ್ ಆದ ನಂತರವೇ ರಸ್ತೆ ಕಾಮಗಾರಿ ಮಾಡಬೇಕಾಗುತ್ತದೆ. ಗ್ರಾಮದೇವಿ ರಥವೂ ಇದೇ ರಸ್ತೆಯಿಂದ ಸಾಗುತ್ತದೆ. ನಾನು ಯಾವುದೇ ಕಾರಣಕ್ಕಾಗಿ ಓಟ್‌ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಯಾರಾದರೂ ತಪ್ಪು ತಿಳಿದುಕೊಂಡರೆ ಅದಕ್ಕೆ ನಾನು ಹೊಣೆಗಾರನಲ್ಲ.

> ರಮೇಶ ಜಾರಕಿಹೊಳಿ
ಪೌರಾಡಳಿತ ಸಚಿವ