ಬೆಳಗಾವಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನನ್ನ ರಾಜೀನಾಮೆ ಬಗ್ಗೆ ಪದೇಪದೇ ಹೇಳುತ್ತಲೇ ಇದ್ದಾನೆ. ಅವನೇನು ಭವಿಷ್ಯ ಹೇಳುವ ಜ್ಯೋತಿಷಿಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಬೆಳಗಾವಿ ಅಧಿವೇಶನಕ್ಕೆ ಹೊಸ ಸಿಎಂ ಬರುತ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಹೇಳಿಕೆಗೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು. ಅವತ ತಂದೆ ಯಡಿಯೂರಪ್ಪ ಪೋಕ್ರೋ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ವಿಜಯೇಂದ್ರ ಮೊದಲು ಅವರನ್ನು ಪ್ರಶ್ನೆ ಮಾಡಲಿ, ಅವರ ಹುದ್ದೆಯ ರಾಜೀನಾಮೆ ಕೇಳಲಿ. ತಂದೆ ಮೇಲಿನ ಆರೋಪದ ಜವಾಬ್ದಾರಿ ಹೊತ್ತು ವಿಜಯೇಂದ್ರ ತಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ದಸರಾ ಆರಂಭಕ್ಕೂ ಮೊದಲೇ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುತ್ತಿದ್ದರು. ಈಗ ದಸರಾ ಮುಗಿದಿದೆ. ಇದೀಗ ಬೆಳಗಾವಿ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸಲಾಗುವುದು
ಎನ್ನುತ್ತಿದ್ದಾರೆ ಎಂದು ಚಾಟಿ ಬೀಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿರುವ ಭಾರತದಲ್ಲಿ ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ ವೇಳೆ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ನ್ಯಾಯಯುತವಾಗಿ ಬರಬೇಕಾದ ಹಣ ಕರ್ನಾಟಕ ರಾಜ್ಯಕ್ಕೆ ನೀಡಿಲ್ಲ. ರಾಜ್ಯಕ್ಕೆ ಅನ್ಯಾಯವಾದರೂ ಬಿಜೆಪಿ ಸಂಸದರು ಕೇಂದ್ರ ಸರ್ಕಾರವನ್ನು ಕೇಳುತ್ತಿಲ್ಲ. ಕೋಮುವಾದಿ ವಿಚಾರದಲ್ಲಿ ಮಾತ್ರ ಬಿಜೆಪಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ಕರ್ನಾಟಕದ ಜನತೆಯೂ ಸೇರಿದಂತೆ ಅನ್ಯಾಯಕ್ಕೆ ಒಳಗಾದ ಎಲ್ಲ ರಾಜ್ಯಗಳು ಧ್ವನಿ ಎತ್ತಬೇಕು. ಒಕ್ಕೂಟ ವ್ಯವಸ್ಥೆ ಮೇಲೆ ನಂಬಿಕೆ ಇದೆ, ಹೀಗಾಗಿ ನ್ಯಾಯಯುತ ಪಾಲು ಕೊಟ್ಟರೆ ನಮಗೆ ಅನುಕೂಲ ಎಂದರು.
ಕಾಗೆ ಹೇಳಿಕೆಗೆ ಡಿಸಿಎಂ ಪ್ರತಿಕ್ರಿಯೆ:
ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ರಾಜು ಕಾಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಡಿ.ಕೆ. ಶಿವಕುಮಾರ, ಶಾಸಕ ರಾಜು ಕಾಗೆ ಅವರ ಕ್ಷೇತ್ರದ ಶೇ.10ರಷ್ಟು ಕೆಲಸ ಉಳಿದುಕೊಂಡಿದೆ ಎಂದು ಅವರು ಹೇಳಿದ್ದಿದಾರೆ.ಆ ಕೆಲಸ ಮಾಡಿಕೊಡುತ್ತೇವೆ. ನಾವು ಮಾಡದೇ ಬೇರೆ ಯಾರು ಮಾಡುತ್ತಾರೆ. ಸುಮ್ಮನೆ ಕ್ಷೇತ್ರದವರ ಜತೆಗೆ ಅಳಲು ತೋಡಿಕೊಂಡಿದ್ದಾರೆ.
ಆದರೆ, ನಾವು ಅವರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ ಹೇಳಿದರು.