ಎನ್​ಪಿಎಸ್ ರದ್ದತಿಗೆ ಆಗ್ರಹಿಸಿ ಬೃಹತ್ ಧರಣಿ

ಬೆಳಗಾವಿ: ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದುಗೊಳಿಸಿ, ನಿಶ್ಚಿತ ಪಿಂಚಣಿ ಯೋಜನೆ (ಒಪಿಎಸ್) ಮರುಸ್ಥಾಪಿಸುವಂತೆ ಒತ್ತಾಯಿಸಿ ಕೊಂಡಸಕೊಪ್ಪದ ಪ್ರತಿಭಟನಾ ವೇದಿಕೆಯಲ್ಲಿ ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು ಬೃಹತ್ ಧರಣಿ ನಡೆಸಿದರು.

ಬುಧವಾರ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು, ದೆಹಲಿ ಸರ್ಕಾರಿ ನೌಕರರಿಗೆ ಎನ್​ಪಿಎಸ್ ರದ್ದುಗೊಳಿಸಲು ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿದೆ. ಕರ್ನಾಟಕದಲ್ಲೂ 2006 ಏ.1ರಿಂದ ಜಾರಿಗೆ ಬಂದಿರುವ ಎನ್​ಪಿಎಸ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಬಿಎಸ್​ವೈ ಭೇಟಿ: ಎನ್​ಪಿಎಸ್ ನೌಕರರ ಪ್ರತಿಭಟನಾ ಸ್ಥಳಕ್ಕೆ ಬಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸರ್ಕಾರಿ ನೌಕರರ ಸಮಸ್ಯೆ ಆಲಿಸಿ, ತಕ್ಷಣ ಪರಿಹರಿಸುವಂತೆ ಸಿಎಂ ಮೇಲೆ ಒತ್ತಡ ಹೇರುತ್ತೇನೆ ಎಂದು ಭರವಸೆ ನೀಡಿದರು.

ಹೋರಾಟ ಹಿಂದಕ್ಕೆ: ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘದೊಂದಿಗೆ ಸಿಎಂ ಮಾತುಕತೆ ನಡೆಸಿದ್ದು, 2 ತಿಂಗಳೊಳಗೆ ಸಮಸ್ಯೆ ಪರಿಹರಿಸುವ ಆಶ್ವಾಸನೆ ನೀಡಿರುವ ಕಾರಣ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಸಿಎಂ ನಮ್ಮ ಸಮಸ್ಯೆ ಇತ್ಯರ್ಥಕ್ಕೆ 3 ತಿಂಗಳ ಕಾಲಾವಕಾಶ ಕೇಳಿದ್ದರು. ನಾವು 2 ತಿಂಗಳಿಗೆ ಒತ್ತಾಯಿಸಿದ್ದು, ಅವರು ಒಪ್ಪಿಕೊಂಡಿದ್ದಾರೆ. ಎನ್​ಪಿಎಸ್ ಸಮಿತಿ ರಚನೆ ವಿಚಾರವಾಗಿ ಚಿಂತಿಸದಂತೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯುತ್ತಿರುವುದಾಗಿ ಮುಖಂಡರು ತಿಳಿಸಿದರು.

ನಾನು ಹೆಬ್ಬೆಟ್ಟು ಗಿರಾಕಿಯಲ್ಲ

‘ನಾನು ಹೆಬ್ಬೆಟ್ಟು ಗಿರಾಕಿಯಲ್ಲ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ, ಸ್ವಂತ ತೀರ್ಮಾನ ಕೈಗೊಳ್ಳುತ್ತೇನೆ. ನೌಕರರಿಗೆ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಸಿಎಂ ಕುಮಾರಸ್ವಾಮಿ ನೌಕರರ ನಿಯೋಗಕ್ಕೆ ತಿಳಿಸಿದರು. ಸಮಿತಿಯಲ್ಲಿ ಎನ್​ಪಿಎಸ್ ನೌಕರರ ಸಂಘಟನೆಯ ಇಬ್ಬರನ್ನು ಸೇರಿಸಲು ಸಿಎಂ ಇದೇ ವೇಳೆ ಒಪ್ಪಿಗೆ ನೀಡಿದರು.

ಸಂಕಷ್ಟಗಳ ಸರಮಾಲೆ

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೌಕರರು, ಹಿರೇಬಾಗೇವಾಡಿ ಬಳಿ ಸಮಾವೇಶಗೊಂಡರು. ಅಲ್ಲಿಂದ ಪಾದಯಾತ್ರೆಯೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಬರಲು ಮುಂದಾದಾಗ, ಪೊಲೀಸ್ ಇಲಾಖೆ ಅಡ್ಡಗಾಲು ಹಾಕಿತು. ಪೊಲೀಸ್ ವಾಹನದಲ್ಲೇ ಬರುವಂತೆ ಪಟ್ಟು ಹಿಡಿದಾಗ, ಮಾತಿನ ಚಕಮಕಿ ನಡೆಯಿತು. ಆಗ ಕೆಲವರು ವಾಹನದಲ್ಲೇ ಪ್ರತಿಭಟನಾ ಸ್ಥಳಕ್ಕೆ ಬಂದರೆ, ಇನ್ನೂ ಕೆಲವರು ಕಾಲ್ನಡಿಗೆಯಲ್ಲಿ 8 ಕಿಮೀ ಕ್ರಮಿಸಿ ಬಂದರು. ಪ್ರತಿಭಟನಾ ಸ್ಥಳದಲ್ಲಿ ಊಟ-ಕುಡಿಯುವ ನೀರು ಸಿಗದೆ ಹೈರಾಣಾದರು.

ಮುಖ್ಯಮಂತ್ರಿ ನೀಡಿರುವ ಭರವಸೆ ಒಪ್ಪಿಕೊಂಡು ಮುಷ್ಕರ ಹಿಂದಕ್ಕೆ ಪಡೆಯುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟ ಇದ್ದೇ ಇರುತ್ತದೆ.

| ಶಾಂತಾರಾಮ, ಅಧ್ಯಕ್ಷ, ಎನ್​ಪಿಎಸ್ ನೌಕರರ ಸಂಘ

 

ಡಿಕೆಶಿ ಸಂಧಾನ ವಿಫಲ

ಎನ್​ಪಿಎಸ್ ನೌಕರರ ಸಮಸ್ಯೆ ಆಲಿಸುವ ಜತೆಗೆ ಪ್ರತಿಭಟನೆಗೆ ಅಂತ್ಯ ಹಾಡುವ ಸಲುವಾಗಿ ಬಂದಿದ್ದ ಸಚಿವ ಡಿ.ಕೆ.ಶಿವಕುಮಾರ್ ಮಾತಿಗೆ ಪ್ರತಿಭಟನಾಕಾರರು ಸೊಪ್ಪು ಹಾಕಲಿಲ್ಲ. ಎನ್​ಪಿಎಸ್ ಹಿಂಪಡೆಯುವ ಅಧಿಕಾರ ನಮಗಿಲ್ಲ. ದೂರದಿಂದ ಕಷ್ಟಪಟ್ಟು ಇಲ್ಲಿಗೆ ಬಂದಿದ್ದೀರಿ; ಹಾಗಾಗಿ ಸಮಸ್ಯೆ ಆಲಿಸಲು ಬಂದಿದ್ದೆ ಎಂದು ಡಿಕೆಶಿ ಪ್ರತಿಭಟನಾಕಾರರಿಗೆ ತಿಳಿಸಿದರು. ಆಗ ಪ್ರತಿಭಟನಾಕಾರರು, ಸಿಎಂ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕೆಂದು ಪಟ್ಟು ಹಿಡಿದರು. ಸುದ್ದಿಗಾರರೊಂದಿಗೆ ಡಿಕೆಶಿ ಮಾತನಾಡಿ, ಸಿಎಂ ಸದನದಲ್ಲಿದ್ದಾರೆ. ಇಲ್ಲಿಗೆ ಬಂದು ಸಮಸ್ಯೆ ಆಲಿಸುವುದು ಕಷ್ಟ. ಹಾಗಾಗಿ, ಸಂಘದ 10 ಮುಖಂಡರನ್ನು ಸುವರ್ಣಸೌಧಕ್ಕೆ ಕರೆದೊಯ್ದು ಸಿಎಂ ಮತ್ತು ಹಣಕಾಸು ಇಲಾಖೆ ಜತೆ ರ್ಚಚಿಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ಆತಂಕ ಬೇಡ

ಬೆಳಗಾವಿ: ಹೊಸ ಪಿಂಚಣಿ ಯೋಜನೆ ನೌಕರರ ಬಗ್ಗೆ ಸರ್ಕಾರಕ್ಕೆ ಅನುಕಂಪವಿದ್ದು, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸರ್ಕಾರದ ಬಗ್ಗೆ ವಿಶ್ವಾಸವಿರಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ವಿಧಾನಸಭೆಯಲ್ಲಿ ಬರದ ಚರ್ಚೆ ನಡುವೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ವಿಷಯ ಪ್ರಸ್ತಾಪಿಸಿ, ರಾಜ್ಯದ ಮೂಲೆ ಮೂಲೆಗಳಿಂದ ಎನ್​ಪಿಎಸ್ ನೌಕರರು ಬೆಳಗಾವಿಗೆ ಬಂದು ಪ್ರತಿಭಟಿಸುತ್ತಿದ್ದಾರೆ. ಇಂದಿನ ಕಾಲದಲ್ಲಿ ನಿವೃತ್ತಿ ವೇತನವಿಲ್ಲದೆ ಜೀವನ ನಿರ್ವಹಿಸುವುದು ಕಷ್ಟ. ಎಚ್.ಡಿ.ದೇವೇಗೌಡರು ಚುನಾವಣೆಗೂ ಮುನ್ನ, ನಮ್ಮ ಸರ್ಕಾರ ಬಂದರೆ ಹಳೇ ಪದ್ಧತಿ ಮರು ಜಾರಿಗೆ ತರಲಿದೆ ಎಂದು ಭರವಸೆ ನೀಡಿದ್ದಾಗಿ ನೌಕರರು ಹೇಳುತ್ತಿದ್ದಾರೆ. ಎನ್​ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಮುಂದುವರಿಸುವುದು ಸಮಂಜಸ. ಸರ್ಕಾರ ಮಾನವೀಯ ದೃಷ್ಟಿಯಿಂದ ಹಾಗೂ ನೌಕರರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಬಿಜೆಪಿಯ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ ದನಿಗೂಡಿಸಿದರು.

ಇದಕ್ಕುತ್ತರಿಸಿದ ಕುಮಾರಸ್ವಾಮಿ, ಈಗಾಗಲೇ ಸರ್ಕಾರ ಎನ್​ಪಿಎಸ್ ಸಾಧಕ -ಬಾಧಕ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ರಚಿಸಿದೆ. ನಾವು ಹಳೇ ಪದ್ಧತಿಯನ್ನು ಮತ್ತೆ ತರುವುದಿಲ್ಲ ಎಂದು ಎಲ್ಲೂ ಹೇಳಿಲ್ಲ ಎಂದರು.