More

    ಪಾಲಿಕೆ ಪ್ರಗತಿ ಪರಿಶೀಲನೆ ಸಭೆ, ಅಧಿಕಾರಿಗಳ ಬೆವರಿಳಿಸಿದ ಸದಸ್ಯರು!

    ಬೆಳಗಾವಿ: ನಾಲಾಗಳ ಅಸ್ವಚ್ಛತೆ, ಒಳಚರಂಡಿ ಸಮಸ್ಯೆ, ಬೀದಿ ದೀಪಗಳ ದುರಸ್ತಿ ಕಾರ್ಯ, ಬಾವಿಗಳಿಗೆ ನುಗ್ಗುತ್ತಿರುವ ಕಲುಷಿತ ನೀರಿನ ಸಮಸ್ಯೆ ಸೇರಿ ನಾಗರಿಕರ ಸಮಸ್ಯೆಗಳು ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಶಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿದವು.
    ವಾರ್ಡ್‌ಗಳಿಗೆ ತೆರಳಿ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಪಾಲಿಕೆ ಸದಸ್ಯರು ಮುಗಿಬಿದ್ದು, ತರಾಟೆಗೆ ತೆಗೆದುಕೊಂಡರು. ನಾಲ್ಕು ವರ್ಷಗಳಿಂದ ನಾಲಾಗಳನ್ನು ಸ್ವಚ್ಛಗೊಳಿಸದೇ ಸ್ವಚ್ಛಗೊಳಿಸುತ್ತಿದ್ದೇವೆಂದು ಸಭೆಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳನ್ನು ಪಾಲಿಕೆ ಸದಸ್ಯ ರವಿ ಧೋತ್ರೆ ಅವರು ಬೆವರಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಹಳಷ್ಟು ಸದಸ್ಯರು ಬೀದಿದೀಪಗಳು, ಒಳಚರಂಡಿ ಸಮಸ್ಯೆ, ಬಾವಿಗಳಿಗೆ ನುಗ್ಗುತ್ತಿರುವ ಕಲುಷಿತ ನೀರಿನ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಪಾಲಿಕೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಪರಿಣಾಮಕಾರಿಯಾಗಿ ಮಾಡುತ್ತಿಲ್ಲ ಎಂದು ಆರೋಪಿಸಿದರು. ಮಧ್ಯ ಪ್ರವೇಶಿಸಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರು, ವಾರ್ಡ್‌ಗಳಿಗೆ ತೆರಳಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡಬೇಕು. ಇಲ್ಲವೇ ಅವರ ಉಪಸ್ಥಿತಿಯಲ್ಲಿ ಕಾಮಗಾರಿ ಮಾಡಿಸಬೇಕು ಎಂದು ತಿಳಿಸಿದರು.
    ಪಾಲಿಕೆಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಮಗೇನು ಮಾಹಿತಿ ನೀಡುತ್ತಿಲ್ಲ ಎಂದು ರವಿ ಧೋತ್ರೆ ಅವರು ಸಭೆಯಲ್ಲಿ ಧ್ವನಿ ಎತ್ತಿದಾಗ, ಮಧ್ಯ ಪ್ರವೇಶಿಸಿದ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ ವಯಕ್ತಿಕವಾಗಿ ಯಾರಿಗೂ ಮಾತನಾಡಬೇಡಿ ಎಂದು ಸಿಡಿಮಿಡಿಗೊಂಡರು. ಆಗ ಎಲ್ಲ ಸದಸ್ಯರು ಲಕ್ಷ್ಮೀ ನಿಪ್ಪಾಣಿಕರ ಅವರಿಗೆ ಸಿಟ್ಟಿನಲ್ಲಿ ಮಾತನಾಡುತ್ತೀರಿ ಏಕೆ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಆಗ ನಿಪ್ಪಾಣಿಕರ ಅವರು ಸುಮ್ಮನಾಗಿ ಸಭೆಗೆ ತಮ್ಮ ಬಳಿ ಇದ್ದ ಕೆಲ ಕಾಮಗಾರಿ ಮಾಹಿತಿ ತಿಳಿಸಿದರು.
    ಬಳಕೆಯಾಗದ 9.5 ಕೋಟಿ ರೂ. ಸದಸ್ಯರು ಗರಂ:
    ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಪಾಲಿಕೆಯ ಲೋಕೋಪಯೋಗಿ ಇಲಾಖೆಯಿಂದ ಮೂಲಸೌಲಭ್ಯಗಳ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಈ ವಿಭಾಗದಲ್ಲಿ 9.5 ಕೋಟಿ ಹಣವು ಖರ್ಚಾಗದೇ ಹಾಗೇ ಉಳಿದಿದೆ. ಇಂತಹ ಅಧಿಕಾರಿಗಳು ನಮಗೆ ಬೇಡ. ಇವರನ್ನು ರಿಲೀವ್ ಮಾಡಿ ಬೇರೆಕಡೆ ಕಳುಹಿಸಿ ಎಂದು ಸದಸ್ಯ ಹನುಮಂತ ಕೊಂಗಾಲಿ ಅವರು ಸಭೆಯಲ್ಲಿ ಧ್ವನಿ ಎತ್ತಿದರು. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ. ಅಧಿಕಾರಿಗಳು ಕ್ಷೇತ್ರ ಸುತ್ತಿ ನೋಡಿ ಬರಲಿ ಎಂದು ಸಿಡಿಮಿಡಿಗೊಂಡರು. ಆಗ ಪಾಲಿಕೆ ಆಯುಕ್ತರು ಏನುನು ಕೆಲಸವಾಗಿದೆ ಸಭೆ ತಿಳಿಸುವಂತೆ ಕಾಲಾವಕಾಶ ನೀಡಿದರು. ಕೆಲ ಹೊತ್ತಿನ ಬಳಿಕ ಅಧಿಕಾರಿಗಳು ಮಾರ್ಚ್‌ವರೆಗೆ ಕಾಲಾವಕಾಶವಿದೆ. ಹಣವನ್ನು ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು.
    ಮೇಯರ್ ಶೋಭಾ ಸೋಮನಾಚೆ ಮಾತನಾಡಿ, ಪಾಲಿಕೆ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಕೈಗೊಳ್ಳಬೇಕು. ಸದಸ್ಯರು ಹಾಗೂ ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.
    ಪಾಲಿಕೆಗೆ ಯಾವ ಯಾವ ಅನುದಾನ ಬರುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಿಲ್ಲ. ಯಾವ್ಯಾವ ಅನುದಾನಗಳು ಬರುತ್ತವೆ ಮಾಹಿತಿ ನೀಡಬೇಕು ಹಾಗೂ ಎಷ್ಟು ಹಣ ಯಾವ ಕಾರ್ಯಕ್ಕೆ ಖರ್ಚಾಗಿದೆ ಎಂಬುದನ್ನೂ ತಿಳಿಸಬೇಕು ಎಂದು ಪಟ್ಟು ಹಿಡಿದರು. ಎಲ್ಲ ಸದಸ್ಯರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದರು.
    ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಸದಸ್ಯರು ಅಸಮಾಧಾನ ಹೊರ ಹಾಕಿದರು. ನಗರದಲ್ಲಿ ನೀರಿನ ಸಮಸ್ಯೆ ನಿವಾರಿಸಬೇಕು. ಮಳೆಗಾಲ ಆರಂಭವಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು. ಆರೋಗ್ಯ, ಪರಿಸರ, ಕಂದಾಯ ವಿಭಾಗದ ಪ್ರಗತಿ ಪರಿಶೀಲನೆ ನಡೆಸಲಾಯಿತು. ವೇದಿಕೆಯಲ್ಲಿ ಉಪಮೇಯತ್ ರೇಷ್ಮಾ ಪಾಟೀಲ, ಪರಿಷತ್ ಕಾರ್ಯದರ್ಶಿ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts