Friday, 16th November 2018  

Vijayavani

Breaking News

ರಾಜ್ಯ ಸರ್ಕಾರದ ಭವಿಷ್ಯ ಬೆಳಗಾವಿ ಕೈಯಲ್ಲಿದೆ

Thursday, 13.09.2018, 2:04 AM       No Comments

ಬೆಳಗಾವಿ: ರಾಜ್ಯ ಸರ್ಕಾರದ ಭವಿಷ್ಯ ಬೆಳಗಾವಿ ಜಿಲ್ಲೆ ರಾಜಕಾರಣವನ್ನೇ ಅವಲಂಬಿಸಿದೆ. ರಾಜಕೀಯ ಧ್ರುವೀಕರಣದಲ್ಲಿ ಇಲ್ಲಿಯ ರಾಜಕಾರಣಿಗಳ ಪಾತ್ರವೇ ಅಧಿಕ. ಹಾಗಾಗಿ ಬೆಳಗಾವಿ ರಾಜಕಾರಣವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಎಚ್ಚರಿಸಿದ್ದಾರೆ. ಪ್ರತಿ ಬಾರಿ ಸರ್ಕಾರ ರಚಿಸುವಾಗಲೂ ಬೆಳಗಾವಿ ಜಿಲ್ಲೆ ರಾಜಕಾರಣವೇ ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ಕಾರ ಬೀಳಿಸುವ ಪ್ರಶ್ನೆ ಬಂದಾಗಲೂ ಇಲ್ಲಿಯ ರಾಜಕಾರಣದ ಪಾತ್ರ ಇರುತ್ತದೆ. ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಜಿಲ್ಲೆಯ ವಸಂತರಾವ್ ಪಾಟೀಲ ರಾಜೀನಾಮೆ ಕಾರಣವಾಯಿತು. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಸರ್ಕಾರ ರಚಿಸುವ ಸಂದರ್ಭದಲ್ಲಿ ಯಾರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ರಾಜಕೀಯ ಬಲ್ಲವರಿಗೆಲ್ಲ ಗೊತ್ತು. ಇತಿಹಾಸ ಮರುಕಳಿಸಿದರೆ ಅಚ್ಚರಿ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ರಾಜಕೀಯ ಲೆಕ್ಕಾಚಾರವನ್ನು ತೆರೆದಿಟ್ಟರು.

ರಾಜ್ಯದ ರಾಜಕೀಯ ಬೇರೆ, ಬೆಳಗಾವಿ ಜಿಲ್ಲೆ ರಾಜಕಾರಣ ಬೇರೆ. ಸರ್ಕಾರದ ಭವಿಷ್ಯ ಬೆಳಗಾವಿ ಅವಲಂಬಿಸುವುದು ತಪು್ಪವುದಿಲ್ಲ. ಇಷ್ಟೆಲ್ಲ ಇದ್ದರೂ ಬೆಳಗಾವಿಯವರು ಮುಖ್ಯ ಮಂತ್ರಿ ಆಗಲು ಸಾಧ್ಯವಾಗಿಲ್ಲ. ಭವಿಷ್ಯದಲ್ಲಿ ಇದು ಸಾಕಾರಗೊಳ್ಳಬಹುದು ಎಂದು ಡಾ.ಕೋರೆ ಆಶಾಭಾವ ವ್ಯಕ್ತಪಡಿಸಿದರು. ಸಮ್ಮಿಶ್ರ ಸರ್ಕಾರದ ಭವಿಷ್ಯ ಬಗ್ಗೆ ಏನನ್ನೂ ಹೇಳುವುದಿಲ್ಲ. ಕಾಂಗ್ರೆಸ್​ನಲ್ಲಿ ಒಳ ಜಗಳವಿದೆ. ಜಾರಕಿಹೊಳಿ ಸಹೋದರರು ಆ ಜಗಳದಿಂದ ಹೊರಗೆ ಬಂದ ಮೇಲೆ ಈ ಬಗ್ಗೆ ಮಾತನಾಡುತ್ತೇವೆ. ಸದ್ಯ ಯಾರ ಭವಿಷ್ಯವೂ ಗೊತ್ತಿಲ್ಲ ಎಂದರು.

ಜಾರಕಿಹೊಳಿ ಬಂದರೆ ಸ್ವಾಗತ

ಬಿಜೆಪಿ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಒಳಗೊಂಡು ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇವೆ ಎಂದು ಪ್ರಭಾಕರ ಕೋರೆ ತಿಳಿಸಿದರು. ಜಾರಕಿಹೊಳಿ ಸಹೋದರರು ರಾಜಕೀಯವಾಗಿ ನನ್ನ ಸಂಪರ್ಕದಲ್ಲಿ ಇಲ್ಲ. ನಾವಿದ್ದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಸದ್ಯ ಆ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರಿಲ್ಲ. ಸಿದ್ದರಾಮಯ್ಯ ಸಹ ಮೂಲ ಕಾಂಗ್ರೆಸ್ಸಿಗರಲ್ಲ. ಹಾಗಾಗಿ ಒಳ ಜಗಳ ಹೆಚ್ಚಾಗಿದೆ ಎಂದರು.

ಸಾಂಸ್ಕೃತಿಕ ಕನ್ನಡ ಭವನ ಉದ್ಘಾಟನೆ

ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮಾರಕ ಸಾಂಸ್ಕೃತಿಕ ಕನ್ನಡ ಭವನವನ್ನು ಸೆ.15ರಂದು ಸಿಎಂ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಸ್ಮಾರಕ ಸಾಂಸ್ಕೃತಿಕ ಕನ್ನಡ ಭವನ ಸಮಿತಿ ಅಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದರು.

15ರಂದು ಜನತಾ ದರ್ಶನ

ಬೆಂಗಳೂರು: ಜಿಲ್ಲಾ ಮಟ್ಟದಲ್ಲಿ ಜನತಾದರ್ಶನ ನಡೆಸುವುದಾಗಿ ಹೇಳಿದ್ದ ಸಿಎಂ ಕುಮಾರಸ್ವಾಮಿ, ಸೆ.15ರಂದು ಬೆಳಗಾವಿಯಿಂದ ಆರಂಭಿಸಲಿದ್ದಾರೆ. ಬೆಂಗಳೂರಿನಲ್ಲಿ ನಡೆಸುವ ಜನತಾ ದರ್ಶನಕ್ಕೆ ವಿವಿಧೆಡೆಯಿಂದ ಜನ ಬರುತ್ತಿದ್ದಾರೆ. ಅದು ತಪ್ಪಿ ಆಯಾ ಜಿಲ್ಲಾ ಕೇಂದ್ರದಲ್ಲಿಯೇ ಪರಿ ಹಾರ ಸಿಗಬೇಕೆಂಬ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ನಡೆಸುವ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದರು. ಸೆ.15ರಂದು ಸಿಎಂ ಬೆಳಗಾವಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಸುವರ್ಣ ವಿಧಾನಸೌಧದಲ್ಲಿ ಮಧ್ಯಾಹ್ನ 3ರಿಂದ 5 ಗಂಟೆವರೆಗೆ ಜನತಾದರ್ಶನ ನಡೆಸಲಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ. ಅಂದು ಬೆಳಗ್ಗೆ ಕೆಎಲ್​ಇ ಶಿಕ್ಷಣ ಸಂಸ್ಥೆ ಅಮೃತ ಮಹೋತ್ಸವದಲ್ಲಿ ರಾಷ್ಟ್ರಪತಿಗಳೊಂದಿಗೆ ಸಿಎಂ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

Back To Top