ಬೆಳಗಾವಿ ಎಪಿಎಂಸಿಗಾಗಿ ಒಂದಾಗುವರೇ ಜಾರಕಿಹೊಳಿ ಸೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​?

ಬೆಳಗಾವಿ: ಬೆಳಗಾವಿಯ ಪಿಎಲ್​ಡಿ ಬ್ಯಾಂಕ್​ ಚುನಾವಣೆಯನ್ನು ಪ್ರತಿಷ್ಠೆಯ ಕಣ ಮಾಡಿಕೊಂಡಿದ್ದ ಜಾರಕಿಹೊಳಿ ಸೋದರರು ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​, ಸದ್ಯ ಎಪಿಎಂಸಿ ಚುನಾವಣೆಯಲ್ಲಿ ಮತ್ತೆ ಎದುರುಬದುರಾಗಿದ್ದಾರೆ. ಆದರೆ, ಎರಡೂ ಬಣ ರಾಜಿ ಸಂಧಾನದ ಮೂಲಕ ಈ ಚುನಾವಣೆಯ ಕಗ್ಗಂಟನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಬೆಳಗಾವಿಯ ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಇಂದು (ಆ.15) ಬೆಳಗ್ಗೆ 10 ಗಂಟೆಗೆ ಚುನಾವಣೆ ನಿಗದಿಯಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲು ಕಾಂಗ್ರೆಸ್​ನ ಜಾರಕಿಹೊಳಿ ಸೋದರರು ನಿರ್ಧರಿಸಿದ್ದು, ಅದಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರೊಂದಿಗೆ ಸೌಹಾರ್ದತೆಯಿಂದ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸದ್ಯ ಯುವರಾಜ ಕದಂ, ಸುಧೀರ ಗಡ್ಡ ಎಂಬುವವರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಇವರಿಬ್ಬರನ್ನು ಬಿಟ್ಟು ಮೂರನೇಯವರು ಆಯ್ಕೆಯಾದರೂ ಅಚ್ಚರಿಯಿಲ್ಲ. ಸದ್ಯ 14 +3(ನಾಮನಿರ್ದೇಶಿತ) ಸದಸ್ಯ ಬದಲ ಎಪಿಎಂಸಿಯಲ್ಲಿ ಕಾಂಗ್ರೆಸ್ 5, ಬಿಜೆಪಿ 2, ಎಂಇಎಸ್​ 5, ತಟಸ್ಥ 2 ಹಾಗೂ ಮೂವರು ನಾಮನಿರ್ದೇಶಿತರಿದ್ದಾರೆ. ಕಾಂಗ್ರೆಸ್​ ಮತ್ತು ಎಂಇಎಸ್​​ ಇಲ್ಲಿ ಸಮಬಲ ಹೊಂದಿದ್ದು, ಮರಾಠ ಸಮುದಾಯಕ್ಕೇ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆಗಳಿವೆ.

ಈ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಜಾರಕಿಹೊಳಿ ಸೋದರರೊಂದಿಗೆ ಹಣಾಹಣಿಗೆ ಇಳಿಯದೇ, ಸಮನ್ವಯ ಸಾಧಿಸುವ ಸಾಧ್ಯತೆಗಳು ನಿಚ್ಚಳವಾಗಿದೆ. ಅಷ್ಟೇ ಅಲ್ಲದೆ, ಅಧ್ಯಕ್ಷ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಈಗಾಗಲೇ ಹೇಳಿರುವ ಸತೀಶ್​ ಜಾರಕಿಹೊಳಿ ಮಾತುಗಳಲ್ಲಿ, ಲಕ್ಷ್ಮೀ ಹೆಬ್ಬಾಳ್ಕರ್​ ತಮಗೆ ತೊಡಕಾಗುವುದಿಲ್ಲ ಎಂಬ ವಿಶ್ವಾಸ ಪರೋಕ್ಷವಾಗಿ ವ್ಯಕ್ತವಾಗಿದೆ.