ಪರಿಹಾರ ವಿತರಣೆ ಪ್ರಕ್ರಿಯೆಗೆ ಚಾಲನೆ 

ಎಸ್.ರಾಜು ಪಾಂಡವಪುರ
ಕನಗನಮರಡಿ ಸಮೀಪ ಖಾಸಗಿ ಬಸ್ ನಾಲೆಯೊಳಗೆ ಬಿದ್ದು ಮೂವತ್ತು ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಘೋಷಿಸಿರುವ ಪರಿಹಾರದ ಹಣ ನೀಡಲು ಸಮಗ್ರ ಮಾಹಿತಿ ಕಲೆಹಾಕಲಾಗುತ್ತಿದೆ.
ಅಂದು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವ ಹೇಳುವುದರ ಜತೆಗೆ ತಲಾ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದರು. ಈ ಸಂಬಂಧ ಪರಿಹಾರ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ.
ಗೊಂದಲವಾಗದಂತೆ ಎಚ್ಚರಿಕೆ: 
ಈಗಾಗಲೇ ಮುಖ್ಯಮಂತ್ರಿಗಳ ಆದೇಶದಂತೆ ಜಿಲ್ಲಾಡಳಿತದಿಂದ ಪಾಂಡವಪುರ ತಾಲೂಕು ಆಡಳಿತಕ್ಕೆ 1.5 ಕೋಟಿ ರೂ. ಪರಿಹಾರ ಹಣ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಮೃತಪಟ್ಟವರ ಕುಟುಂಬದಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮತ್ತೊಂದೆಡೆ ಕೆಲವೆಡೆ ಪರಿಹಾರ ವಿತರಣೆಗೆ ಸಂಬಂಧಿಸಿ ಗೊಂದಲವಿದ್ದು, ಹಣ ಯಾರಿಗೆ ಕೊಡಬೇಕೆಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲವಾಗದಂತೆ ಸಂಬಂಧಪಟ್ಟವರಿಗೆ ಪರಿಹಾರದ ಹಣ ಕೊಡಲು ದಾಖಲಾತಿ ಸಂಗ್ರಹಿಸಲಾಗುತ್ತಿದೆ. ಇದಾದ ಬಳಿಕ ಜಿಲ್ಲಾ ಉಸ್ತವಾರಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಒಪ್ಪಿಗೆ ಪಡೆದು, ನಂತರ ಪರಿಹಾರದ ಮೊತ್ತವನ್ನು ಮೃತರ ಕುಟುಂಬದ ಸದಸ್ಯರಿಗೆ
ವಿತರಿಸಲಾಗುತ್ತದೆ.
ತಿಳಿಯದ ಕಾರಣ: 
ಅವಘಡ ನಡೆದು ಮೂರು ದಿನ ಕಳೆದರೂ ದುರಂತಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಆರ್‌ಟಿಒ ಅಧಿಕಾರಿಗಳು ಭೇಟಿ ನೀಡಿ ಅಪಘಾತಕ್ಕೀಡಾದ ಬಸ್ ಅನ್ನು ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ತೊಂದರೆಯಿಂದ ನಾಲೆಗೆ ಉರುಳಿತೆ ಅಥವಾ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಘಟನೆ ಸಂಭವಿಸಿತೆ ಎಂಬುವುದರ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸುತ್ತಿದ್ದಾರೆ. ಆದರೆ, ಆ ವರದಿಯನ್ನು ಯಾವಾಗ ಬಹಿರಂಗಪಡಿಸುತ್ತಾರೆಂಬ ಕುತೂಹಲ ಎಲ್ಲರಲ್ಲಿಯೂ ಇದೆ.
ಖಾಸಗಿ ಬಸ್‌ಗೆ ಕಡಿವಾಣವಿಲ್ಲ: 
ಸರಿಯಾದ ನಿರ್ವಹಣೆ ಇಲ್ಲದೆ ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿರುವ ಖಾಸಗಿ ಬಸ್‌ಗಳ ಸಂಚಾರಕ್ಕೆ ಕಡಿವಾಣ ಹಾಕಲು ಆರ್‌ಟಿಒ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಘಟನೆ ಬಳಿಕವೂ ಖಾಸಗಿ ಬಸ್‌ಗಳು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಕೊಂಡು ಸಂಚರಿಸುತ್ತಿವೆ. ಜತೆಗೆ ಸರ್ಕಾರಿ ಬಸ್‌ಗಳಿಗಿಂತ ಮುಂಚಿತವಾಗಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಧಾವಂತದಲ್ಲಿ ಅತಿ ವೇಗ ಚಾಲನೆ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಆರ್‌ಟಿಒ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಈಗಾಗಲೇ ಸೂಕ್ತ ತಪಾಸಣೆ ನಡೆಸಿ ಸಂಚಾರಕ್ಕೆ ಯೋಗ್ಯವಾಗಿಲ್ಲದ ಬಸ್‌ಗಳ ಸಂಚಾರವನ್ನು ನಿಷೇಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಪತ್ತೆಯಾಗದ ಚಾಲಕ: 
ಮೂವತ್ತು ಜನರ ಸಾವಿಗೆ ಕಾರಣನಾಗಿರುವ ಖಾಸಗಿ ಬಸ್ ಚಾಲಕ ಇನ್ನೂ  ಪತ್ತೆಯಾಗಿಲ್ಲ. ಘಟನೆ ನಡೆದ ದಿನ ಸ್ಥಳದಿಂದ ನಾಪತ್ತೆಯಾಗಿರುವ ಚಾಲಕ ಮಲ್ಲನಾಯಕನಕಟ್ಟೆಯ ಮಹದೇವು ವಶಕ್ಕೆ ಪಡೆಯಲು ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಇನ್ನು ಈಗಾಗಲೇ ವಶಕ್ಕೆ ಪಡೆದಿರುವ ನಿರ್ವಾಹಕ ತಾಂಡವನನ್ನು ವಿಚಾರಣೆಗೊಳಪಡಿಸಲಾಗಿದೆ.
ಕನಗನಮರಡಿ ಸಮೀಪ ಸಂಭವಿಸಿದ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದಂತೆ, ತಾಲೂಕು ಆಡಳಿತಕ್ಕೆ ಒಂದೂವರೆ ಕೋಟಿರೂ.ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಮೃತರ ಕುಟುಂಬಸ್ಥರಿಗೆ ತಲಾ 5ಲಕ್ಷ ರೂ. ಪರಿಹಾರ  ನೀಡಲಾಗುವುದು.
 ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ