ಬೆಳಗಾವಿ: ಪರಿಚಿತನಂತೆ ಕುಶಲೋಪರಿ ವಿಚಾರಿಸಿ 1.5 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿರುವ ಬಗ್ಗೆ ಶನಿವಾರ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿರೇಬಾಗೇವಾಡಿಯ ಬಸನಗೌಡ ಹಾದಿಮನಿ ಎಂಬುವವರು ವಂಚನೆಗೊಳಗಾದವರು.
ತಮ್ಮೂರಿನಿಂದ ಬಸ್ ಮೂಲಕ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಪರಿಚಿತರಂತೆ ವರ್ತಿಸಿ, ನಮಸ್ಕಾರ್ರಿ ಗೌಡ್ರ, ಏನ್ರೀ ನಿಮ್ಮ ಮಗನ ಬಿಟ್ಟ ನೀವು ಬಂದಿರಲ್ಲ ಎನ್ನುತ್ತ ಮಗನ ಗೆಳೆಯರಂತೆ ವರ್ತಿಸಿದ್ದಾರೆ. ಆಗಂತುಕರ ಮಾತು ನಂಬಿದ ಬಸನಗೌಡ ಜುವೆಲ್ಲರಿ ಅಂಗಡಿಗೆ ಬಂದಿರುವುದಾಗಿ ತಿಳಿಸಿದ್ದಾರೆ.
ನಾವು ಸಹ ಅದೇ ಅಂಗಡಿ ಮಾಲೀಕರನ್ನು ಬಿಡಲು ಬಂದಿದ್ದೇವೆ. ನಿಮ್ಮ ಬಂಗಾರಕ್ಕೆ ಹೆಚ್ಚು ಬೆಲೆ ಕೊಡಿಸುತ್ತೇವೆ ಎಂದು ನಂಬಿಸಿ ಬರೋಬ್ಬರಿ ಆರು ತೊಲ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.