ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಆರಂಭ

ಗಂಗೊಳ್ಳಿ: ಕಡಲ್ಕೊರೆತ ಉಂಟಾಗಿರುವ ತ್ರಾಸಿ ಸಮೀಪದ ಹೊಸಪೇಟೆ ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಮಂಗಳವಾರ ಪ್ರಾರಂಭಗೊಂಡಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಹೊಸಪೇಟೆ ಕಡಲ ತೀರದಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು ಮೀನುಗಾರರು ಹಾಗೂ ಕಡಲತಡಿಯ ನಿವಾಸಿಗಳು ಆತಂಕಕ್ಕೀಡಾಗಿದ್ದರು. ತಡೆಗೋಡೆ ನಿರ್ಮಾಣಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಶಿಲೆಕಲ್ಲುಗಳನ್ನು ತಂದು ಹಾಕಿದ್ದು ಕಾಮಗಾರಿ ಪ್ರಾರಂಭಿಸಿರಲಿಲ್ಲ. ವಿಜಯವಾಣಿ ಈ ಬಗ್ಗೆ ಸಚಿತ್ರ ಲೇಖನ ಪ್ರಕಟಿಸಿ ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನ ಸೆಳೆದಿತ್ತು. ಪತ್ರಿಕೆ ವರದಿಯನ್ನು ಗಮನಿಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಕಡಲ್ಕೊರೆತದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತ ಮತ್ತು ಬಂದರು ಇಲಾಖೆ ಅಧಿಕಾರಿಗಳು ಜನರ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಮುಂಜಾಗ್ರತೆ ಕ್ರಮವಾಗಿ ತಡೆಗೋಡೆ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಮಂಗಳವಾರದಿಂದ ತಡೆಗೋಡೆ ಕಾಮಗಾರಿ ಆರಂಭವಾಗಿದೆ. ತ್ರಾಸಿ-ಮರವಂತೆ ತೀರದಲ್ಲಿ ನಡೆಯುತ್ತಿರುವ ಸುಸ್ಥಿರ ಕಡಲ ತೀರ ನಿರ್ವಹಣಾ ಯೋಜನೆಯಿಂದ ತ್ರಾಸಿ-ಹೊಸಪೇಟೆ-ಕಂಚುಗೋಡು ಪರಿಸರದಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದು, ಮಳೆಗಾಲದಲ್ಲಿ ಕಡಲ್ಕೊರೆತ ತೀವ್ರತೆ ಇನ್ನಷ್ಟು ಹೆಚ್ಚಾಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಹೀಗಾಗಿ ಮಳೆಗಾಲದ ಒಳಗಾಗಿ ತಡೆಗೋಡೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಕಡುಬೇಸಿಗೆಯಲ್ಲೂ ಕಡಲ್ಕೊರೆತ: ತ್ರಾಸಿ-ಹೊಸಪೇಟೆ-ಕಂಚುಗೋಡು ಕಡಲ ತೀರದಲ್ಲಿ ಕಡಲ್ಕೊರೆತ ಬೇಸಿಗೆಯಲ್ಲೂ ತೀವ್ರಗೊಳ್ಳುವ ಮೂಲಕ ತೀರ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿತ್ತು. ಕಳೆದ ಗುರುವಾರ ಸಣ್ಣಮಟ್ಟದಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ಮುಂದುವರಿದು ತೀವ್ರತೆ ಪಡೆದಿತ್ತು. ಕಡಲಿನ ಭಾರಿ ಅಲೆಗಳು ತೀರ ಪ್ರದೇಶಕ್ಕೆ ರಭಸವಾಗಿ ಅಪ್ಪಳಿಸಿದ್ದು, ಸುಮಾರು 200 ಮೀಟರ್ ಕಡಲ ತೀರ ಸಮುದ್ರ ಪಾಲಾಗಿತ್ತು. ಕಡಲ ತೀರದಲ್ಲಿರುವ ಮರಗಳೂ ಸಮುದ್ರ ಪಾಲಾಗಿತ್ತು. ಈ ಭಾಗದಲ್ಲಿ ಸುಮಾರು 200ಕ್ಕೂ ಮಿಕ್ಕಿ ಮೀನುಗಾರಿಕಾ ದೋಣಿಗಳನ್ನು ಇಡಲಾಗುತ್ತಿದ್ದು, ಕಡಲ್ಕೊರೆತದಿಂದ ದೋಣಿ, ಬಲೆ ಹಾಗೂ ಇಂಜಿನ್‌ಗಳಿಗೆ ಹಾನಿಯಾಗಿತ್ತು.