ಭಿಕ್ಷಾಟನೆಗಿಲ್ಲ ಕಡಿವಾಣ

>

ಲೋಕೇಶ್ ಸುರತ್ಕಲ್
ರಾಜ್ಯದಲ್ಲಿ ಭಿಕ್ಷಾಟನೆ ಅಪರಾಧ. ಭಿಕ್ಷೆ ಬೇಡುವುದು ಇಲ್ಲವೇ ನೀಡುವುದು ಕಂಡು ಬಂದರೆ ಕರ್ನಾಟಕ ಪ್ರೊಹಿಬಿಷನ್ ಆಫ್ ಬೆಗ್ಗರಿ ಆ್ಯಕ್ಟ್-1975 ಪ್ರಕಾರ ದಂಡ ವಿಧಿಸಬಹುದು. ಹಾಗಿದ್ದರೂ ಭಿಕ್ಷುಕರ ಸಂಖ್ಯೆಗೇನೂ ಕಡಿಮೆಯಿಲ್ಲ. ಮಂಗಳೂರು ಮಹಾನಗರಪಾಲಿಕೆ ಪ್ರಮುಖ ಉಪನಗರ ಸುರತ್ಕಲ್‌ನಲ್ಲಿಯೂ ಭಿಕ್ಷುಕರ ಉಪಟಳ ಮಿತಿ ಮೀರಿದೆ.
ಭಿಕ್ಷಾಟನೆಯೇ ಅಪರಾಧ, ಅದರಲ್ಲೂ ಮಕ್ಕಳನ್ನು ಭಿಕ್ಷಾಟನೆಗೆ ಬಳಸುವುದು ಗಂಭೀರ ಅಪರಾಧ. ಹಾಗಿದ್ದರೂ ನಗರ ಪ್ರದೇಶದಲ್ಲಿ ಕಂಕುಳಲ್ಲಿ ಮಕ್ಕಳನ್ನು ಎತ್ತಿಕೊಂಡು ಭಿಕ್ಷಾಟನೆ ಮಾಡುವ ಮಹಿಳೆಯರು ಸಾಕಷ್ಟಿದ್ದಾರೆ. ಮಹಿಳೆ ಕಂಕುಳಲ್ಲಿರುವ ಮಗುವಿನ ತಾಯಿ ಆಕೆಯೇ ಎಂದು ಹೇಳುವಂತಿಲ್ಲ. ಸುರತ್ಕಲ್ ಪ್ರದೇಶದಲ್ಲಿ ಈ ರೀತಿಯ ಭಿಕ್ಷಾಟನೆಯಿಂದ ಮಹಿಳೆಯರು ಮತ್ತು ಮಕ್ಕಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ಭಿಕ್ಷುಕರ ತಂಡವೇ ಬೀಡುಬಿಟ್ಟಿದ್ದು, ಇವರ ಕಾರ‌್ಯಚಟುವಟಿಕೆಯೇ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಬೇಡುವುದು ಭಿಕ್ಷೆಯಾದರೂ ಕೆಲವೊಮ್ಮೆ ಇವರ ಕೈಯಲ್ಲಿ ಗರಿ ಗರಿ ನೋಟುಗಳೂ ಪತ್ತೆಯಾಗುತ್ತವೆ. ಚಿಲ್ಲರೆ ಕಾಸಿಗಾಗಿ ಕೈಚಾಚುವ ಇಂತಹವರ ಕೈಗೆ ಗರಿಗರಿ ನೋಟು ಎಲ್ಲಿಂದ ಸಿಗುತ್ತದೆ ಎಂಬುದೇ ಸೋಜಿಗ.

ವ್ಯವಸ್ಥಿತ ಮಾಫಿಯಾ:  ಒಂದು ಹೊತ್ತಿನ ಕೂಳಿಗಾಗಿ ಕೆಲವರು ಭಿಕ್ಷೆ ಬೇಡುವವರಿದ್ದರೆ, ಇನ್ನೂ ಕೆಲವರು ಇದನ್ನೇ ಒಂದು ದಂಧೆಯನ್ನಾಗಿಸಿಕೊಂಡಿದ್ದಾರೆ. ಭಿಕ್ಷಾಟನೆ ಹಿಂದೆ ವ್ಯವಸ್ಥಿತ ಮಾಫಿಯಾವೂ ಇದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತಗೊಂಡಿದೆ. ಈ ಹಿಂದೆ ಮಂಗಳೂರಿನಲ್ಲಿ ಟೆಂಪೋ ಒಂದರಲ್ಲಿ ಅಂಗವಿಕಲರನ್ನು ಬೆಳಗ್ಗೆ ಕರೆತಂದು ಭಿಕ್ಷಾಟನೆ ಬಿಟ್ಟು ಸಂಜೆ ವೇಳೆ ಕರೆದೊಯ್ಯುತ್ತಿದ್ದ ಪ್ರಕರಣವೂ ವರದಿಯಾಗಿತ್ತು.

ಬಳಕೆಯಲ್ಲಿಲ್ಲ ನಿರ್ವಸಿತ ಕೇಂದ್ರ:  ಭಿಕ್ಷುಕರ ಸಮಸ್ಯೆ ನಿವಾರಣೆ ಸಲುವಾಗಿ ಸುರತ್ಕಲ್ ಮಹಾನಗರಪಾಲಿಕೆ ಉಪಕಚೇರಿಯಲ್ಲಿ ರಾತ್ರಿ ನಿರ್ವಸಿತರ ವಸತಿ ಕೇಂದ್ರ ಆರಂಭಿಸಲಾಗಿದೆ. ಹಾಗಿದ್ದರೂ ಈ ಕೇಂದ್ರ ಬಳಕೆಯಾಗದೆ ಅದನ್ನು ಪ್ರಸ್ತುತ ಮುಚ್ಚಲಾಗಿದೆ. 1976ರ ಏ.1ರಂದು ಭಿಕ್ಷುಕರ ಪುನರ್ ವಸತಿ ಕೇಂದ್ರಗಳಿರುವ ನಗರಗಳಲ್ಲಿ ಭಿಕ್ಷಾಟನೆ ನಿಷೇಧ ಕಾನೂನು ಜಾರಿಯಾಗಿದೆ. ಮಂಗಳೂರಿನಲ್ಲಿ ಈ ಕೇಂದ್ರವಿದ್ದರೂ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಂಡಿಲ್ಲ ಎನ್ನುತ್ತಾರೆ ಮಾಜಿ ಕಾರ್ಪೋರೇಟರ್ ಹರೀಶ್ ಕೆ.ಸುರತ್ಕಲ್.

ಭಿಕ್ಷುಕರ ರಾತ್ರಿ ನಿರ್ವಸಿತ ಕೇಂದ್ರ ಮಂಗಳೂರಿನಲ್ಲಿದ್ದರೂ ಇದು ಬಳಕೆಯಾಗುತ್ತಿಲ್ಲ. ಭಿಕ್ಷುಕರ ಪುನರ್ ವಸತಿ ಸಲುವಾಗಿ ಸಾರ್ವಜನಿಕರಿಂದ ತೆರಿಗೆಯನ್ನೂ ವಸೂಲಿ ಮಾಡಲಾಗುತ್ತಿದೆ. ಹಾಗಿದ್ದರೂ ಭಿಕ್ಷಾಟನೆ ನಿಯಂತ್ರಣಕ್ಕೆ ಬಂದಿಲ್ಲ. ಅಧಿಕಾರಿಗಳ ನಿರಾಸಕ್ತಿ ಇದಕ್ಕೆ ಮೂಲಕ ಕಾರಣ.
ಪುರುಷೋತ್ತಮ ಚಿತ್ರಾಪುರ ಮಾಜಿ ಉಪಮೇಯರ್

ಭಿಕ್ಷಾಟನೆ ಸಮಸ್ಯೆ ಪರಿಹಾರ ಸಮಾಜ ಕಲ್ಯಾಣ ಇಲಾಖೆ ಹೊಣೆಯಾದರೆ ಭಿಕ್ಷಾಟನೆಗೆ ಮಕ್ಕಳನ್ನು ಬಳಸುವುದನ್ನು ತಡೆಯುವುದು ಮಕ್ಕಳ ಕಲ್ಯಾಣ ಇಲಾಖೆ ಹೊಣೆ.
ರವಿಶಂಕರ್ ಮನಪಾ ಸುರತ್ಕಲ್ ಉಪಕಚೇರಿ ವಲಯಾಯುಕ್ತ

ಸುರತ್ಕಲ್‌ನಲ್ಲಿ ನಾಗರಿಕ ಸಲಹಾ ಸಮಿತಿ ರಾಮಕೃಷ್ಣಮಿಷನ್ ನೇತೃತ್ವದಲ್ಲಿ ಸುಂದರವಾಗಿ ರೂಪಿಸಲಾಗಿರುವ ಫ್ಲೈಓವರ್ ತಳಭಾಗದ ಸ್ವಚ್ಛತೆಗೆ ಭಿಕ್ಷುಕರಿಂದ ಹಾಗೂ ಅಲೆಮಾರಿಗಳಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇಲ್ಲಿ ಪಾನಗೋಷ್ಠಿ ನಡೆಸುತ್ತಿದ್ದ ಭಿಕ್ಷುಕರನ್ನು ಶನಿವಾರ ಪೊಲೀಸ್ ನೆರವಿನಿಂದ ತೆರವುಗೊಳಿಸಲಾಗಿದೆ. ಭಿಕ್ಷಾಟನೆ ಸಮಸ್ಯೆ ಪರಿಹಾರಕ್ಕೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು.
ಸತೀಶ್ ಸದಾನಂದ ಸ್ವಚ್ಛ ಸುರತ್ಕಲ್ ಅಭಿಯಾನ ಸಂಯೋಜಕ