ಬಿಎಸ್ಸೆನ್ನೆಲ್ ಉಳಿವಿಗೆ ಭಿಕ್ಷಾಟನೆ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಮೆಸ್ಕಾಂ ಮತ್ತು ಬಿಎಸ್ ಎನ್‌ಎಲ್ ಬಳಕೆದಾರರ ಸಭೆ ಸುಬ್ರಹ್ಮಣ್ಯ ಗ್ರಾ.ಪಂ ಕಚೇರಿಯ ರಾಜೀವ್ ಗಾಂಧಿ ಸೇವಾಭವನದಲ್ಲಿ ಗುರುವಾರ ನಡೆಯಿತು.

ಮೆಸ್ಕಾಂ ಮತ್ತು ಬಿಎಸ್‌ಎನ್‌ಎಲ್ ಸಂಸ್ಥೆಗಳು ತಮ್ಮ ಸೇವಾ ನ್ಯೂನ ವಾರದೊಳಗೆ ಸುಧಾರಣೆಗೆ ತರಬೇಕು. ಇಲ್ಲವಾದಲ್ಲಿ ಮಾ.29ರಂದು ಪ್ರತಿಭಟನೆ ನಡೆಸಲಾಗುವುದು. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಬಿಎಸ್‌ಎನ್‌ಎಲ್ ಉಳಿಸಿ ಎಂದು ಸುಬ್ರಹ್ಮಣ್ಯ ರಥಬೀದಿಯಲ್ಲಿ ಚೆಂಬು ಹಿಡಿದು ಭಿಕ್ಷಾಟನೆ ನಡೆಸಲಾಗುವುದು. ಸಮರ್ಪಕ ವಿದ್ಯುತ್ ಸೇವೆ ನೀಡದ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಉಪವಿಭಾಗ ಆದರೂ ವಿದ್ಯುತ್ ಸಮಸ್ಯೆ ಸುಧಾರಿಸಿಲ್ಲ. ವ್ಯವಹಾರಸ್ಥರು ದಿನವಿಡಿ ಜನರೇಟರ್ ಬಳಸಬೇಕಿದೆ. ವ್ಯಾಪಾರಸ್ಥರು ನಷ್ಟಕ್ಕೊಳಗಾಗಿದ್ದಾರೆ ಎಂದು ಗ್ರಾಹಕರು ಆರೋಪಿಸಿದರು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಾಸುಗಟ್ಟಲೆ ಬರುವುದೇ ಇಲ್ಲ. ಬಂದರೂ ಅರ್ಧ ತಾಸಿನಲ್ಲಿ ಹತ್ತಾರು ಬಾರಿ ಬಂದು ಹೋಗುತ್ತದೆ. ಗೃಹಿಣಿಯರು, ವಿದ್ಯಾರ್ಥಿಗಳು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಉಪಕರಣಗಳು ಕೆಟ್ಟು ನಷ್ಟ ಉಂಟಾಗುತ್ತಿದೆ. ನೀರು ಹಾಯಿಸಲಾಗದೆ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ ಎಂದು ಬಳ್ಪದ ಉದಯಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಬಿಎಸ್‌ಎನ್‌ಎಲ್ ಸಿಬ್ಬಂದಿಗೆ ಐದು ತಿಂಗಳಿಂದ ವೇತನ ನೀಡಿಲ್ಲ. ಜನರೇಟರ್‌ಗಳಿಗೆ ಡೀಸೆಲ್ ಇಲ್ಲ. ನಾವು ಯಾವ ಶತಮಾನದಲ್ಲಿದ್ದೇವೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಬಾಲಕೃಷ್ಣ ಭೀಮಗುಳಿ ಹೇಳಿದರು. ಅಶೋಕ್ ನೆಕ್ರಾಜೆ, ರಾಜೇಶ್ ಎನ್ ಎಸ್., ಹರೀಶ್ ಇಂಜಾಡಿ, ರವೀಂದ್ರ ರುದ್ರಪಾದ, ಉದಯಕುಮಾರ್ ಬಳ್ಪ, ನಿತಿನ್ ಭಟ್ ನೂಚಿಲ, ದಿನೇಶ್ ಕೆ. ಕಾಳಪ್ಪಾಡಿ, ಬಾಲಸುಬ್ರಹ್ಮಣ್ಯ ಹರಿಹರ, ಜಯಪ್ರಕಾಶ ಕಲ್ಲೇರಿಕಟ್ಟ ಉಪಸ್ಥಿತರಿದ್ದರು.

ಶೀಘ್ರ ಸಮಸ್ಯೆ ಬಗೆಹರಿಸಲು ಆಗ್ರಹ: ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಸಂಪರ್ಕಕ್ಕೆ ಇರುವುದು ಸರ್ಕಾರಿ ಸಾಮ್ಯದ ಬಿಎಸ್‌ಎನ್‌ಎಲ್ ಸೇವೆ ಮಾತ್ರ. ದಿನವಿಡಿ ಸಿಗ್ನಲ್ ಇರುವುದಿಲ್ಲ. ಕರೆಂಟು ಇದ್ದಾಗ ಮೊಬೈಲ್ ಸಿಗ್ನಲ್ ಇರುತ್ತಿತ್ತು. ಕೆಲ ದಿನಗಳಿಂದ ಅದೂ ಇಲ್ಲ. ಕರೆಂಟು ಹೋದಾಗ ಜನರೇಟರ್ ಬಳಸಲು ಸಿಬ್ಬಂದಿಗಳಿಲ್ಲ. ಇದ್ದರೂ ಡೀಸೆಲ್ ಇರುವದಿಲ್ಲ. ಹೀಗಾಗಿ ಬಿಎಸ್‌ಎನ್ ಎಲ್ ನಂಬಿದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಸುವಂತೆ ಗ್ರಾಹಕರು ಒತ್ತಾಯಿಸಿದರು.