ಮತ್ತೊಬ್ಬ ಉದ್ಯಮಿ ವಿದೇಶಕ್ಕೆ ಪರಾರಿ

ನವದೆಹಲಿ: ಐಡಿಬಿಐ ಬ್ಯಾಂಕ್​ಗೆ 600 ಕೋಟಿ ರೂ. ವಂಚನೆ ಮಾಡಿರುವ ಆರೋಪ ಹೊಂದಿರುವ ಏರ್​ಸೆಲ್ ಕಂಪನಿ ಸ್ಥಾಪಕ ಶಿವಶಂಕರನ್ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಸಿಬಿಐ ನಿರ್ಲಕ್ಷ್ಯ ಇದಕ್ಕೆ ಕಾರಣ ಎನ್ನಲಾಗಿದೆ. ಶಿವಶಂಕರನ್ ಸುಸ್ತಿದಾರರಾಗಿರುವ ಕುರಿತು ಸಿಬಿಐನಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದೇಶ ಬಿಟ್ಟು ಓಡಿಹೋಗದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ದೆಹಲಿಯ ಪಂಚತಾರಾ ಹೋಟೆಲ್​ನಲ್ಲಿ ಸಿಬಿಐ ಜಂಟಿ ನಿರ್ದೇಶಕರೊಬ್ಬರನ್ನು ಭೇಟಿ ಮಾಡಿರುವ ಶಿವಶಂಕರನ್, ನೋಟಿಸ್​ನಲ್ಲಿ ನಿಯಮ ಸಡಿಲ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬಿಐನ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಈ ನಿಯಮ ಸಡಿಲಿಸಲಾಗಿದೆ ಎಂದು ತಿಳಿದುಬಂದಿದೆ. ಪಿ.ಚಿದಂಬರಂ ವಿರುದ್ಧದ ಏರ್​ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಶಿವಶಂಕರನ್ ಪ್ರಮುಖ ದೂರುದಾರರು. ಇವರು ದೇಶ ಬಿಟ್ಟು ಓಡಿಹೋಗಿದ್ದರಿಂದ ಚಿದಂಬರಂ ವಿರುದ್ಧದ ಪ್ರಕರಣ ದುರ್ಬಲವಾಗಲಿದೆ.

Leave a Reply

Your email address will not be published. Required fields are marked *