ಮಲ್ಲೇಶ್ವರ ಸ್ವರ್ಣಾಬ ದೇವಿಗೆ ಅರಿಶಿಣ ಕುಂಕುಮ ಎರಚಿ ಸಂಭ್ರಮಿಸಿದ ಭಕ್ತರು

ಬೀರೂರು: ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದ ಶಕ್ತಿದೇವತೆ ಸ್ವರ್ಣಾಬ ದೇವಿ ಬ್ರಹ್ಮರಥೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು. ಬೆಳಗ್ಗೆ ವಲ್ಮಿಕದಲ್ಲಿರುವ ಮೂಲ ದೇವರಿಗೆ ವಿಶೇಷ ಅಭಿಷೇಕ ಮತ್ತು ಪೂಜೆ, ಗಜಾರೋಹಣ ಉತ್ಸವ ನಡೆಸಲಾಯಿತು. ನಂತರ ಕನ್ನಿಕಾ ಪೂಜೆ ಮತ್ತು ಕಲ್ಯಾಣೋತ್ಸವ ನಡೆಸಿ ದೇವಿ ಉತ್ಸವ ವಿಗ್ರಹವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು. ಮುತೆôದೆಯರು ಸ್ವರ್ಣಾಬ ದೇವಿಗೆ ಅರಿಶಿಣ ಕುಂಕುಮ ಎರಚಿ ಸಂಭ್ರಮಿಸಿದರು. ಅರಳಿಮರದಮ್ಮ ಮತ್ತು ಪುರದ ಕರಿಯಮ್ಮ ದೇವಿಗೂ ಅರಿಶಿಣ ಸಮರ್ಪಿಸಲಾಯಿತು.

ಬಲಿ ಪೂಜೆ ನಡೆಸಿ ಶ್ರೀದೇವಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥದಲ್ಲಿರುವ ದೇವಿಗೆ ಮಂಗಳಾರತಿ ಮಾಡಿದ ನಂತರ ಭಕ್ತರು ರಥ ಎಳೆದು ಸಂಭ್ರಮಿಸಿದರು. ರಥಕ್ಕೆ ಬಾಳೆಹಣ್ಣು ಎಸೆದು ಹರಕೆ ತೀರಿಸಿದರು. ಸುಡುಬಿಸಿಲನ್ನೂ ಲೆಕ್ಕಿಸದೆ ಭಕ್ತರು ದೇವಿ ರಥೋತ್ಸವದಲ್ಲಿ ಭಾಗವಹಿಸಿದ್ದರು.

ರಥೋತ್ಸವದಲ್ಲಿ ಸುತ್ತಮುತ್ತಲ ಗ್ರಾಮಸ್ಥರು, ಹೊರ ರಾಜ್ಯಗಳ ಭಕ್ತರು ಆಗಮಿಸಿದ್ದರು. ಪುರೋಹಿತರಾದ ಸುಬ್ರಹ್ಮಣ್ಯ ಸ್ವಾಮಿ, ದೇವಿಪ್ರಸಾದ್ ಮತ್ತು ತಂಡದಿಂದ ಧಾರ್ವಿುಕ ವಿಧಿವಿಧಾನಗಳು ನಡೆದವು. ಸಂಜೆ ರಥದ ಮೇಲಿರುವ ಸ್ವರ್ಣಾಬ ದೇವಿಗೆ ಅಷ್ಟಾವಧಾನ ಸೇವೆ ನೆರವೇರಿಸಲಾಯಿತು. ಮೈಸೂರಿನ ಹಿರಿಯ ರಂಗ ಕಲಾವಿದ ವೈ.ಎಂ.ಪುಟ್ಟಣ್ಣಯ್ಯ ಅವರಿಂದ ರಂಗಗೀತೆಗಳ ಕಾರ್ಯಕ್ರಮ ನಡೆಯಿತು.