ಶವ ಸಾಗಿಸುವ ವೇಳೆ ಹೆಜ್ಜೇನು ದಾಳಿ: 7 ಜನರ ಸ್ಥಿತಿ ಚಿಂತಾಜನಕ, ಅರ್ಧಗಂಟೆ ಶವ ಅನಾಥ !

ರಾಮನಗರ: ಶವ ಸಾಗಿಸುವ ವೇಳೆ ಹೆಜ್ಜೇನು ದಾಳಿಯಿಂದ 7 ಜನರ ಸ್ಥಿತಿ ಚಿಂತಾಜನಕವಾಗಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಲಿಂಗಯ್ಯ ಎಂಬುವವರು ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದರು. ಮಂಗಳವಾರ ಶವವನ್ನು ಸ್ಮಶಾನಕ್ಕೆ ಸಾಗಿಸುವ ಮಾರ್ಗ ಮಧ್ಯದ ಮರದಲ್ಲಿದ್ದ ಹೆಜ್ಜೇನು ಜನರ ಮೇಲೆ ದಾಳಿ ಮಾಡಿದೆ.

ಜೇನು ನೋಣಗಳ ದಾಳಿಯನ್ನು ತಪ್ಪಿಸಿಕೊಳ್ಳಲು ಜನರು ಹಾಗೂ ಸಂಬಂಧಿಕರು ಶವವನ್ನು ಬಿಟ್ಟು ಅರ್ಧ ಗಂಟೆ ಪರಾರಿಯಾಗಿದ್ದಾರೆ. 25 ಜನ ಗಾಯಗೊಂಡಿದ್ದು, 7 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)