More

    ಬೆದ್ರಾಳ ಹೊಳೆ ನೀರು ಮಲಿನ

    ಶಶಿ ಈಶ್ವರಮಂಗಲ
    ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಬೆದ್ರಾಳ ಹೊಳೆಯಲ್ಲಿ ತ್ಯಾಜ್ಯ ತುಂಬಿ ಕೊಳೆಯುತ್ತಿದ್ದು, ಇಲ್ಲಿಂದ ಬೀರುವ ದುರ್ವಾಸನೆ ಪರಿಸರದ ಮಂದಿಯ ನೆಮ್ಮದಿ ಕೆಡಿಸಿದೆ.
    ಸ್ವಚ್ಛತೆ ನಿರ್ಲಕ್ಷಿಸಿ ಕೆಲವು ಕಿಡಿಗೇಡಿಗಳು ಹೊಳೆಗೆ ತ್ಯಾಜ್ಯ ಬಿಸಾಡುತ್ತಿರುವ ಪರಿಣಾಮ ಸ್ಥಳೀಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಸುಬ್ರಹ್ಮಣ್ಯ ಮಂಜೇಶ್ವರ ಅಂತಾರಾಜ್ಯ ರಸ್ತೆಯ ಬೆದ್ರಾಳ ಸೇತುವೆ ಬಳಿ ಈ ಅವ್ಯವಸ್ಥೆ ಮನೆ ಮಾಡಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಹೊಳೆ ನೀರಿನಲ್ಲಿ ಮಾಂಸ ತ್ಯಾಜ್ಯ, ತರಕಾರಿ ತ್ಯಾಜ್ಯ, ಕೊಳೆತ ಕೋಳಿ ಮೊಟ್ಟೆ, ಬಳಕೆ ಮಾಡಿದ ಪ್ಲಾಸ್ಟಿಕ್ ಬಟ್ಟಲುಗಳು, ನಿರುಪಯುಕ್ತ ಆಹಾರ ಪದಾರ್ಥಗಳು ಕೊಳೆತು ನಾರುತ್ತಿದೆ.

    ಮಾಂಸದಂಗಡಿಯವರು ಕೋಳಿತ್ಯಾಜ್ಯ, ಹಂದಿ ತ್ಯಾಜ್ಯಗಳನ್ನು ಗೋಣಿ ಚೀಲ- ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ತಡರಾತ್ರಿ ವಾಹನಗಳಲ್ಲಿ ತಂದು ಇಲ್ಲಿ ಎಸೆಯುತ್ತಿದ್ದಾರೆ. ಸಮಾರಂಭಗಳಲ್ಲಿ ಉಳಿದ ತ್ಯಾಜ್ಯಗಳನ್ನು, ಸತ್ತ ಪ್ರಾಣಿಗಳನ್ನು ತಂದು ನೀರಿಗೆ ಎಸೆಯಲಾಗುತ್ತಿದೆ. ಈಗ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಎಸೆದ ತ್ಯಾಜ್ಯಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗದೆ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಹೊಳೆಯ ಇಕ್ಕೆಲಗಳು ಈಗ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಹೊಳೆ ನೀರು ಕೂಡ ಮಲಿನವಾಗುತ್ತಿದೆ.

    ಮಾದರಿ ವಾರ್ಡ್
    ಬೆದ್ರಾಳ ಸೇತುವೆಯ ಪಕ್ಕದಲ್ಲೇ ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಕಡೆಗೆ ಹೋಗುವ ರಸ್ತೆ ಇದೆ. ಸೇತುವೆ ಬಳಿ ಅಳವಡಿಸಲಾದ ಚರ್ಚ್ ಬೋರ್ಡಿನಲ್ಲಿ ‘ಕೆಮ್ಮಿಂಜೆ-ಚಿಕ್ಕಮುಡ್ನೂರು ಮಾದರಿ ವಾರ್ಡ್’ ಎಂದು ಉಲ್ಲೇಖಿಸಲಾಗಿದೆ. ಆದರೆ ಇಲ್ಲಿ ಈ ಉಲ್ಲೇಖವನ್ನು ಅಣಕಿಸುವ ಅವ್ಯವಸ್ಥೆ ಇದೆ.

    ಈ ಹಿಂದೆ 2 ಬಾರಿ ಈ ಸಮಸ್ಯೆಯ ಕುರಿತು ಸಂಬಂಧಪಟ್ಟ ನಗರಸಭೆಯ ಪೌರಾಯುಕ್ತರಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ಈಗ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವೂ ಇಲ್ಲದಿರುವುದರಿಂದ ಇಲ್ಲಿ ಏನು ಆದರೂ ಕೇಳುವವರಿಲ್ಲ.
    ಗಣೇಶ್ ಬೆದ್ರಾಳ(ಪುಳಿತ್ತಡಿ) ಸ್ಥಳೀಯರು.

    ಬೀದಿನಾಯಿಗಳು ಹಾಗೂ ಪಕ್ಷಿಗಳು ತ್ಯಾಜ್ಯ ಮಾಂಸವನ್ನು ತಂದು ಮನೆಯ ವಠಾರಕ್ಕೆ ಹಾಕುತ್ತಿರುವುದರಿಂದ ನಮಗೆ ನೆಮ್ಮದಿ ಇಲ್ಲದಾಗಿದೆ. ಸೇತುವೆ ಬಳಿ ಸಿಸಿ ಕ್ಯಾಮರಾ ಅಳವಡಿಸುವ ಕೆಲಸ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗಬಹುದು.
    ರವಿಕಲಾ, ಸ್ಥಳೀಯರು.

    ಈ ಬಗ್ಗೆ ಸ್ಥಳೀಯರು ನನಗೆ ದೂರು ನೀಡಿದ್ದು, ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಗರಸಭೆಯ ಜನಪ್ರತಿನಿಧಿಗಳಿಗೆ ಅಧಿಕಾರ ಹಸ್ತಾಂತರವಾಗದ ಕಾರಣ ನಮಗೆ ಈಗ ಕ್ರಮಕೈಗೊಳ್ಳಲು ಆಗುತ್ತಿಲ್ಲ. ತ್ಯಾಜ್ಯ ಎಸೆಯುವುದನ್ನು ತಡೆಯುವ ಕುರಿತು ಶಾಸಕರಲ್ಲಿ ಹಾಗೂ ನಗರಸಭೆಯ ಆಯುಕ್ತರಲ್ಲಿ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ.
    ಮಮತಾ ರಂಜನ್, ನಗರಸಭೆಯ ಸ್ಥಳೀಯ ವಾರ್ಡ್ ಸದಸ್ಯೆ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts