ಬೆದ್ರಾಳ ತೋಡು ಅತಿಕ್ರಮಣ

ಶಶಿ ಈಶ್ವರಮಂಗಲ
ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮ ಬೆದ್ರಾಳ ವ್ಯಾಪ್ತಿಯ ರಸ್ತೆ ಬದಿ ಹಾದುಹೋಗುವ ತೋಡನ್ನು ರೋಡಾಗಿ (ರಸ್ತೆಯಾಗಿ) ಪರಿವರ್ತಿಸಲಾಗಿದೆ. ತೋಡಿನ ಮಧ್ಯೆ ಮಣ್ಣು, ತ್ಯಾಜ್ಯ ಸುರಿದು ತೋಡಿನ ಸ್ವರೂಪವನ್ನೇ ಬದಲಿಸಲಾಗಿದೆ. ಅಲ್ಲದೆ ತೋಡಿನ ಭಾಗ ಅತಿಕ್ರಮಿಸಲಾಗಿದೆ. ಸಂಬಂಧಪಟ್ಟವರು ಎಚ್ಚೆತ್ತುಗೊಳ್ಳದ ಕಾರಣ ಮಳೆಗಾಲದಲ್ಲಿ ಇಲ್ಲಿ ಕೃತಕ ನೆರೆ ಆತಂಕ ಎದುರಾಗಿದೆ.

ತೋಡೇ ಡಂಪಿಂಗ್ ಯಾರ್ಡ್:  ಪುತ್ತೂರು ಕಾಣಿಯೂರು ರಸ್ತೆಯಲ್ಲಿ ಸಂಚರಿಸುವವರಿಗೆ ಬೆದ್ರಾಳ ಸಮೀಪದ ರೈಲ್ವೆ ಮೇಲ್ಸೇತುವೆ ವ್ಯಾಪ್ತಿಯಲ್ಲಿ ಈ ಅವ್ಯವಸ್ಥೆಯ ಆಗರದ ದರ್ಶನವಾಗುತ್ತಿದೆ. ರಸ್ತೆ ಬದಿ ಹಾದುಹೋಗುವ ತೋಡಿಗೆ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ತ್ಯಾಜ್ಯ ಮೂಟೆಗಳು, ಕೊಳೆತ ಆಹಾರ ಪದಾರ್ಥ, ಪ್ಲಾಸ್ಟಿಕ್ ತ್ಯಾಜ್ಯ, ಖಾಲಿ ಸಿಮೆಂಟ್ ಚೀಲಗಳು ರಸ್ತೆ ಬದಿಯ ತೋಡಿನುದ್ದಕ್ಕೂ ರಾಶಿ ಬಿದ್ದಿದ್ದು, ಇಲ್ಲಿನ ತೋಡಿನ ಭಾಗ ಕೃತಕ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಗೊಂಡಿದೆ. ಇಲ್ಲಿಂದ ಬೀರುವ ಕೊಳೆತ ತ್ಯಾಜ್ಯಗಳ ದುರ್ವಾಸನೆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ನೆಮ್ಮದಿ ಕೆಡಿಸುತ್ತಿದೆ.

ರಸ್ತೆ ಬದಿ ತೋಡಿನಲ್ಲೇ ತ್ಯಾಜ್ಯ ರಾಶಿ ಬಿದ್ದಿದ್ದರೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆ. ಮಳೆ ನೀರು ನಿಂತು ತ್ಯಾಜ್ಯದಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡಬಹುದು ಎಂಬ ಭೀತಿ ಎದುರಾಗಿದೆ. ತೋಡಿನ ಮಧ್ಯೆಯೇ ನಿರುಪಯುಕ್ತ ಸಿಮೆಂಟ್ ತುಂಡು ಮಿಶ್ರಿತ ಮಣ್ಣು ತಂದು ರಾಶಿ ಹಾಕಲಾಗಿದೆ. ಅಲ್ಲೇ ಪಕ್ಕದಲ್ಲಿ ರಸ್ತೆ ಬದಿಗೆ ಸುರಿದ ಮಣ್ಣಿನ ರಾಶಿ ಬಹುತೇಕ ತೋಡಿನ ಭಾಗ ಆವರಿಸಿಕೊಂಡಿದೆ. ತೋಡಿಗೆ ಖಾಸಗಿ ಸ್ಥಳದಿಂದ ಲಾರಿ ಮೂಲಕ ಮರ ಸಾಗಾಟ ಮಾಡುವ ಉದ್ದೇಶದಿಂದ ಮಣ್ಣು, ಮರಳು ತಂದು ಸುರಿದು ಸಮತಟ್ಟುಗೊಳಿಸಿ ತೋಡನ್ನು ರಸ್ತೆಯಾಗಿ ಪರಿವರ್ತಿಸಲಾಗಿದೆ.

ತೋಡಿಗೆ ಮಣ್ಣು ಹಾಕಿ ಅತಿಕ್ರಮಣ
ಬೆದ್ರಾಳ ರೈಲ್ವೆ ಮೇಲ್ಸೇತುವೆ ಸಮೀಪದಲ್ಲಿ ಜಲ್ಲಿ ತಯಾರಿಕಾ ಘಟಕದವರು ತೋಡಿಗೆ ಮಣ್ಣು ಹಾಕಿ ತೋಡಿನ ಭಾಗ ಅತಿಕ್ರಮಿಸಿಕೊಂಡಿದ್ದಾರೆ. ಆದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ತೋಡಿನ ಬದಿಯ ಕೆಲವರು ತೋಡಿಗೆ ಮಣ್ಣು ಸುರಿಯುತ್ತಿರುವ ಪರಿಣಾಮ ತೋಡು ಕಿರಿದಾಗತೊಡಗಿದೆ. ತೋಡಿನ ಮಧ್ಯೆಯೇ ಮಣ್ಣು ರಾಶಿ ಹಾಕಿರುವುದರಿಂದ ಮತ್ತು ತೋಡಿನಲ್ಲಿ ತುಂಬಿಕೊಂಡಿರುವ ತ್ಯಾಜ್ಯದಿಂದ ಮಳೆಗಾಲದಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಲಿದೆ. ಎಡಬಿಡದೆ ಮಳೆ ಸುರಿದ ಸಂದರ್ಭ ಈ ಭಾಗದಲ್ಲಿ ಕೃತಕ ನೆರೆ ಭೀತಿ ಸಮಸ್ಯೆ ಎದುರಾಗಲಿದೆ.

ಅರೆಬರೆ ಕೆಲಸ: ಬೆದ್ರಾಳ ಸೇತುವೆ ಪಕ್ಕ ಮಾತ್ರ ಹೊಂಡ ತೆಗೆದು ನೀರು ಸರಾಗ ಹರಿದು ಹೋಗುವಂತೆ ಮಾಡಲಾಗಿದೆ. ಸೇತುವೆ ಪಕ್ಕ ತುಂಬಿಕೊಂಡಿದ್ದ ತ್ಯಾಜ್ಯ ತೆಗೆದು ತೋಡಿನ ಬದಿಗೆ ಸರಿಸಲಾಗಿದ್ದು, ಹೊಂಡ ತೆಗೆದ ಮಣ್ಣು ತ್ಯಾಜ್ಯದ ಮೇಲೆಯೇ ಸುರಿಯಲಾಗಿದೆ. ತೋಡಿನಲ್ಲಿ ಮಳೆ ನೀರು ಹರಿಯಲಾರಂಭಿಸಿದರೆ ಬದಿಗೆ ಸರಿಸಲಾಗಿರುವ ತ್ಯಾಜ್ಯ ಮತ್ತು ಮಣ್ಣು ಕೊಚ್ಚಿಹೋಗಿ ಮತ್ತೆ ತೋಡು ಪಾಲಾಗಲಿದೆ. ಸೇತುವೆಯ ಎರಡೂ ಬದಿ ತೋಡಿನಲ್ಲಿ ತುಂಬಿಕೊಂಡಿರುವ ತ್ಯಾಜ್ಯ ಹಾಗೆಯೇ ಉಳಿದುಕೊಂಡಿವೆ. ಇಂಥ ಕೆಲಸ ಬೇಕೇ ಎನ್ನುವುದು ಜನರ ಪ್ರಶ್ನೆ. ಮಳೆಗಾಲಕ್ಕೆ ಮುನ್ನವೇ ಸಮಸ್ಯೆ ಎದುರಾಗುವ ಪ್ರದೇಶಗಳಲ್ಲಿ ಪೂರ್ವ ಸಿದ್ಧತೆ ನಡೆಸಬೇಕಾದುದು ಅಧಿಕಾರಿಗಳ ಕರ್ತವ್ಯ. ಆದರೆ ಬೆದ್ರಾಳದಲ್ಲಿ ಈ ರೀತಿ ಅವ್ಯವಸ್ಥೆಗಳಾಗಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಯಾಕೆ ಎಂಬುದು ಜನರ ಪ್ರಶ್ನೆ. ಕೃತಕ ನೆರೆ ಹಾವಳಿ ಉಂಟಾಗಿ ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಿ ಎಂಬುದು ಜನರ ಆಗ್ರಹ.

ಬೆದ್ರಾಳ ರೈಲ್ವೆ ಮೇಲ್ಸೇತುವೆ ವ್ಯಾಪ್ತಿಯಲ್ಲಿ ರಸ್ತೆ ಬದಿಯುದ್ದಕ್ಕೂ ಇರುವ ತೋಡಿಗೆ ಕೆಲವರು ತ್ಯಾಜ್ಯ ಸುರಿಯುತ್ತಿದ್ದಾರೆ. ಕೆಲವರು ವಾಹನಗಳಲ್ಲಿ ತ್ಯಾಜ್ಯ ಮೂಟೆ ತಂದು ಎಸೆಯುತ್ತಿದ್ದಾರೆ. ತೋಡಿಗೆ ಮಣ್ಣು ತುಂಬಿ ಸಮತಟ್ಟುಗೊಳಿಸಿ ತೋಡನ್ನು ರಸ್ತೆಯಾಗಿ ಪರಿವರ್ತಿಸುವ ಕೆಲಸವೂ ಆಗಿದೆ. ಒಟ್ಟಿನಲ್ಲಿ ತೋಡಿನ ಗಾತ್ರ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿದ್ದು, ಸಂಬಂಧಿತರು ಎಚ್ಚೆತ್ತುಕೊಳ್ಳದಿದ್ದಲ್ಲಿ ಕೃತಕ ನೆರೆ ಅಪಾಯ ತಪ್ಪಿದ್ದಲ್ಲ.
ಸುಬೋಧ್‌ಚಂದ್ರ, ಸಾಮಾಜಿಕ ಕಾರ್ಯಕರ್ತ

ಬೆದ್ರಾಳ ರೈಲ್ವೆ ಮೇಲ್ಸೇತುವೆ ಬಳಿ ಖಾಸಗಿಯವರು ನಡೆಸುತ್ತಿರುವ ಜಲ್ಲಿ ಕ್ರಷರ್ ಹೊಳೆ ಬದಿ ಪರಂಬೋಕು ಜಾಗ ಆವರಿಸಿಕೊಂಡಿದೆ. ಇಲ್ಲಿನ ಕಲುಷಿತ ನೀರು ಈ ಹೊಳೆ ಮೂಲಕ ನೇತ್ರಾವತಿ ನದಿ ಸೇರುತ್ತಿದ್ದು, ಕುಡಿಯುವ ನೀರಿಗೂ ಧಕ್ಕೆ ತರುತ್ತಿದೆ. ಮಳೆಗಾಲದಲ್ಲಿ ನೆರೆ ಬಂದು ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಯಿದ್ದು, ಇದಕ್ಕೆ ಮುನ್ನವೇ ಸ್ಥಳೀಯ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತೋಡಿಗೆ ತ್ಯಾಜ್ಯ ಡಂಪಿಂಗ್ ಮಾಡುವ ಬಗ್ಗೆಯೂ ಗಮನ ಹರಿಸಬೇಕು ಎಂಬುದು ನಮ್ಮ ಆಗ್ರಹ.
ಬಾಲಚಂದ್ರ ಸೊರಕೆ, ಬಳಕೆದಾರರ ವೇದಿಕೆ ಪ್ರಮುಖ

Leave a Reply

Your email address will not be published. Required fields are marked *